ರಾಜ್ಯದ ಮೈತ್ರಿ ಸರಕಾರ ಜಾರಿಗೆ ತಂದಿರುವ ಕೈಗಾರಿಕಾ ನೀತಿ ಅನುಷ್ಠಾನ ಸೇರಿದಂತೆ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡದಿರುವುದರಿಂದ ದಲಿತ ಉದ್ದಿಮೆದಾರರಿಗೆ ಅನ್ಯಾಯವಾಗಿದೆ ಎಂದು ರಾಜ್ಯ ದಲಿತ ಉದ್ದಿಮೆದಾರರ ಸಂಘ ಆರೋಪಿಸಿದೆ.
ಕೆಐಎಡಿಬಿ ಮಂಡಳಿಯ-2009-2014ರ ತೀರ್ಮಾನಗಳ ಅನುಷ್ಠಾನ, ಶೇ. 4ರ ಬಡ್ಡಿ ದರದಲ್ಲಿ ಕೆಎಸ್ಎಫ್ಸಿ ಮತ್ತು ಬ್ಯಾಂಕುಗಳಿಂದ ಸಾಲ ವಿತರಣೆ ಮತ್ತು ಪ್ರಗತಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಅನುದಾನ ಹಂಚಿಕೆ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಲು ಫೆ. 26ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಸಭೆ ಕರೆಯಲಾಗಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸನ್ ಹೇಳಿದ್ದಾರೆ.
ಪರಿಶಿಷ್ಟ ಜಾತಿ/ಪಂಗಡದವರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಉದ್ದಿಮೆ ಸ್ಥಾಪಿಸಲು ಎಲ್ಲ ರೀತಿಯ ಸಹಕಾರ, ಮಾರ್ಗದರ್ಶನ ನೀಡುವ ಸಲುವಾಗಿ ಸಂಘ ಕಾರ್ಯನಿರ್ವಹಿಸುತ್ತಿದ್ದು, ಈ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕೈಗಾರಿಕಾ ನೀತಿ ಮತ್ತು ಆಯೋಗಗಳಲ್ಲಿ ಯೋಜನೆಗಳನ್ನು ಘೋಷಿಸಿ ಅನುಷ್ಠಾನಗೊಳಿಸಿದ್ದರೂ ನಿಗದಿತ ಗುರಿ ತಲುಪುವಲ್ಲಿ ಸಾಧ್ಯವಾಗಿಲ್ಲ. ಈ ಎಲ್ಲ ವಿಷಯಗಳ ಕುರಿತು ಚರ್ಚೆ ನಡೆಸಲು ಸಭೆ ಕರೆಸಲಾಗಿದೆ ಎಂದರು.