ಬೆಂಗಳೂರು: ಮೊಬೈಲ್ ನೆಟ್ವರ್ಕ್ ಟವರ್ ಗಳಲ್ಲಿ ಅಳವಡಿಸುತ್ತಿದ್ದ ಯುಬಿಬಿಪಿ (ಯೂನಿವರ್ಸಲ್ ಬೇಸ್ ಬ್ಯಾಂಡ್ ಪ್ರೊಸೆಸಿಂಗ್ ಯೂನಿಟ್) ಕಾರ್ಡ್‌ಗಳನ್ನು ಕಳ್ಳತನ ಮಾಡುತ್ತಿದ್ದ ಗುಲ್ಬರ್ಗ ಮೂಲದ ವ್ಯಕ್ತಿಯನ್ನು ನಗರದ ಪೀಣ್ಯ ಪೊಲೀಸರು ಬಂಧಿಸಿದ್ದಾರೆ. 30 ಲಕ್ಷ ರೂ ಮೌಲ್ಯದ 19 ಯುಬಿಬಿಪಿ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಬಂಧನದಿಂದ ಒಟ್ಟು 9 ಪ್ರಕರಣಗಳು ಪತ್ತೆಯಾಗಿವೆ ಎಂದು ಉತ್ತರ ವಿಭಾಗದ ಡಿ.ಸಿ.ಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಪ್ರಕರಣದ ಬಗ್ಗೆ ಮಾಹಿತಿ ನೀಡಿ ಕೋರಮಂಗಲದ ನಿಶಾ ಇಂಡಸ್ಟ್ರಿಯಲ್ ಸರ್ವಿಸ್ ಕಂಪನಿಯಿಂದ ನೆಲೆಗದರಹಳ್ಳಿ ಮುಖ್ಯರಸ್ತೆಯಲ್ಲಿರುವ ಪ್ರೇಮಾ ಬಾರ್ ಹಿಂಭಾಗದ ಟವರ್ ನಲ್ಲಿ ಅಳವಡಿಸಿದ್ದ ಇಂಡಸ್ ಟವರ್‌ನ ಯುಬಿಬಿಪಿ ಕಾರ್ಡ್‌ಗಳು ಕಾರ್ಯನಿರ್ವಹಿಸದ ಕಾರಣ ಕಂಪನಿಯ ಸೂಪರ್ ವೈಸರ್ ಯೋಗೀಶ್ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಕಾರ್ಡ್ ಗಳು ಇಲ್ಲದಿರುವುದು ಪತ್ತೆಯಾಗಿತ್ತು ಎಂದಿದ್ದಾರೆ.
ನಂತರ ಸುಮಾರು 3 ಲಕ್ಷಗಳ ಬೆಲೆಯ ಎರಡು ಯುಜಿಸಿ ಕಾರ್ಡ್‌ಗಳು ಕಳ್ಳತನವಾಗಿರುವ ಬಗ್ಗೆ ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು. ಸಬ್‌ಇನ್ಸ್‌ಪೆಕ್ಟರ್ ಭಾನು ಪ್ರಕಾಶ್ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಆರೋಪಿಗಳ ಪತ್ತೆ ಕಾರ್ಯ ಕೈಗೊಂಡು ಪರಿಶೀಲನೆ ಕೈಗೊಂಡಿದ್ದಾಗ ಸ್ಥಳದಲ್ಲಿ ಸಿಸಿಟಿವಿ ದೃಶವಾಳಿ ಆಧರಿಸಿ ದ್ವಿಚಕ್ರ ವಾಹನದ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆ. ತಾಂತ್ರಿಕ ಸಹಾಯದಿಂದ ಸೆಪ್ಟೆಂಬರ್ 29 ರಂದು ಸಂಜೆ 6.30 ರಲ್ಲಿ ಚೊಕ್ಕಸಂದ್ರದ ಬಳಿ ಅದೇ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಆತನ ಬಳಿ ಇದ್ದ ಬ್ಯಾಗ್ ಪರಿಶೀಲಸಿದಾಗ ಎರಡು ಯುಬಿಬಿಪಿ ಕಾರ್ಡ್ ಗಳು ಪತ್ತೆಯಾಗಿದ್ದು ಅವುಗಳನ್ನು ಕಳವು ಮಾಡಿಕೊಂಡು ಬಂದಿರುವುದಾಗಿ ಆರೋಪಿ ತಿಳಿಸಿದ್ದಾನೆ. ಆತನ ಹೇಳಿಕೆ ಮೇರೆಗೆ ಸುಮಾರು 30 ಲಕ್ಷ ರೂ ಬೆಲೆ ಬಾಳುವ 19 ಯು.ಬಿ.ಬಿ.ಪಿ ಕಾರ್ಡ್ ಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ವಶಪಡಿಕೊಳ್ಳುವಲ್ಲಿ ಪೀಣ್ಯ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಐ.ಟಿ.ಐ ವ್ಯಾಸಂಗ ಮಾಡಿದ್ದ ಸೈಟ್ ಇಂಜಿನಿಯರ್:
ಆರೋಪಿ ಮೂಲತಃ ಗುಲ್ಬರ್ಗ ದವನಾಗಿದ್ದು ಐ.ಟಿ.ಐ ವ್ಯಾಸಂಗ ಮಾಡಿದ್ದಾನೆ. ಸುಮಾರು ಎರಡು ವರ್ಷಗಳ ಕಾಲ ನಿಶಾ ಇಂಡಸ್ಟ್ರಿಯಲ್ ಸರ್ವಿಸ್ ಕಂಪನಿಯಲ್ಲಿ ಸೈಟ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದನು. ಕೋವಿಡ್ ಕಾರಣ ಕೊಟ್ಟು ಕಂಪನಿ ಆರು ತಿಂಗಳ ಹಿಂದೆ ಕೆಲ್ಸಡಿದ ತೆಗೆದು ಹಾಕಿದೆ. ಆರ್ಥಿಕ ಸಂಕಷ್ಟದಿಂದ ಕೆಲಸ ಹುಡುಕಾಡುತ್ತಿದ್ದ. ಎಲ್ಲಿಯೂ ಕೆಲಸ ಸಿಗದ ಕಾರಣ ಹೇಗಿದ್ದರೂ ಹಿಂದೆ ಸೈಟ್ ಇಂಜಿನಿಯರ್ ಆಗಿ ಕೆಲಸ ಮಾಡಿಬಿಟ್ಟಿದ್ದರಿಂದ ಟವರ್ ಗಳ ಮಾಹಿತಿ, ಯು.ಬಿ.ಬಿ.ಪಿ ಬೆಲೆಯೂ ತಿಳಿದಿದ್ದರಿಂದ ಯೂನಿವರ್ಸಲ್ ಕೀ ಬಳಸಿ ಕೆಳ್ಳತನ ಮಾಡಿದ್ದಾನೆ ಎಂದಿದ್ದಾರೆ.
ಸುಲಭವಾಗಿ ಹಣ ಗಳಿಸಬಹುದು ಎಂದು ಪ್ಲಾನ್ ಮಾಡಿ, ಬೆಳಗಿನ ಜಾವ ಸುಮಾರು 4 ರಿಂದ 5 ಗಂಟೆ ಸಮಯದಲ್ಲಿ ಕಾರ್ಡ್ ಕದ್ದು ವಾಪಸಾಗುತ್ತಿದ್ದ. ಕಳವು ಮಾಡಿದ ಯುಬಿಬಿಪಿ ಕಾರ್ಡ್ ಗಳನ್ನು ಸಾರ್ವಜನಿಕರಿಗೆ ಮಾರಲು ಯತ್ನಿಸಿದ್ದಾನೆ. ಸಾಮಾನ್ಯ ಜನರಿಗೆ ಈ ಕಾರ್ಡ್ ಬಗ್ಗೆ ಸರಿಯಾದ ಮಾಹಿತಿ ಇರದ ಕಾರಣ ಯಾರು ಕೊಂಡುಕೊಳ್ಳಲು ಮುಂದೆ ಬಂದಿಲ್ಲ. ಹೀಗಾಗಿ 12 ಯುಬಿಬಿಪಿ ಕಾರ್ಡ್ ಗಳನ್ನು ತನ್ನ ಬಳಿಯೇ ಇಟ್ಟುಕೊಂಡು ಉಳಿದ 7 ಕಾರ್ಡ್ ಗಳನ್ನು ಕೇವಲ 500 ರೂ ಗೆ ಮಾರಿದ್ದಾನೆ ಎಂದು ತಿಳಿಸಿದ್ದಾರೆ
ಆರೋಪಿಯ ಬಂಧನದಿಂದ ನಗರದ ಕೋಣನಕುಂಟೆ, ಪುಲಿಕೇಶಿ ನಗರದ, ಕಾಡುಗೊಂಡನಹಳ್ಳಿ, ಬನಶಂಕರಿ, ಬಾಗಲೂರಿನ ತಲಾ 1 ಪ್ರಕರಣ, ಸುಬ್ರಮಣ್ಯಪುರದ 2 ಪ್ರಕರಣಗಳು, ರಾಮನಗರ ಜಿಲ್ಲೆ ಕನಕಪುರ ಗ್ರಾಮಾಂತರ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 9 ಕಳವು ಪ್ರಕರಣಗಳು ಪತ್ತೆಯಾಗಿದೆ ಎಂದಿದ್ದಾರೆ.
ಉತ್ತರ ವಿಭಾಗದ ಎ.ಸಿ.ಪಿ ಅರುಣ್ ನಾಗೇಗೌಡ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಬಾಲಾಜಿ ನೇತೃತ್ವದಲ್ಲಿ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿ.ಸಿ.ಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.