ಮಂಗಳೂರಿನ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡು ಗಾಯಗೊಂಡಿದ್ದ ಶಂಕಿತ ಉಗ್ರ ಶಾರಿಕ್ ಚೇತರಿಸಿಕೊಂಡಿದ್ದು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಎರಡೂವರೆ ತಿಂಗಳ ಸತತ ಚಿಕಿತ್ಸೆ ಬಳಿಕ ಶಾರಿಕ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ.
ಕುಕ್ಕರ್ ಬಾಂಬ್ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದ ಶಾರಿಕ್ನನ್ನು ಮಂಗಳೂರಿನಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ 2022ರ ಡಿಸೆಂಬರ್ 17ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗಕ್ಕೆ ದಾಖಲಿಸಲಾಗಿತ್ತು. ಎನ್ಐಎ ಹಾಗೂ ಸ್ಥಳೀಯ ಪೊಲೀಸರ ಭದ್ರತೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈಗ ಶಾರಿಕ್ ಸಂಪೂರ್ಣವಾಗಿ ಗುಣಮುಖನಾಗಿದ್ದು ಡಿಸ್ಚಾರ್ಜ್ ಮಾಡಿದ ತಕ್ಷಣ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಾರಿಕ್ ನನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿ ಎನ್.ಐ.ಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಕಸ್ಟಡಿಗೆ ಪಡೆದು ಶಾರಿಕ್ನ ವಿಚಾರಣೆ ನಡೆಸಲಿದ್ದಾರೆ.
ಇನ್ನು ಈ ಕುಕ್ಕರ್ ಬಾಂಬ್ ಸ್ಫೋಟದ ಹೊಣೆಯನ್ನು ಐಎಸ್ಐಎಸ್ ಉಗ್ರ ಸಂಘಟನೆ ಹೊತ್ತಿತ್ತು. ಐಸಿಸ್ ಸಂಘಟನೆಯ ವಕ್ತಾರ ನಡೆಸುವ ವಾಯ್ಸ್ ಆಫ್ ಕೂರಸ ನಿಯತಕಾಲಿಕೆಯಲ್ಲಿ ಕರ್ನಾಟಕದ ಮಂಗಳೂರು ಮತ್ತು ತಮಿಳುನಾಡಿನ ಕೊಯಮತ್ತೂರು ಸ್ಪೋಟದ ಹೊಣೆ ಹೊತ್ತಿರುವ ಕುರಿತಾಗಿ ಪ್ರಕಟಿಸಲಾಗಿತ್ತು. ಶಂಕಿತ ಉಗ್ರ ಶಾರಿಕ್ ನನ್ನು ಬೆಂಬಲಿಸಿ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿತ್ತು. ಶಂಕಿತ ಉಗ್ರ ಶಾರಿಕ್ ನಮ್ಮ ಸಹೋದರ. ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿಗೆ ಯತ್ನಿಸಲಾಗಿತ್ತು. ಮಂಗಳೂರು ಕೇಸರಿ ಭಯೋತ್ಪಾದಕರ ಭದ್ರಕೋಟೆಯಾಗಿದೆ. ಈ ಕಾರ್ಯಾಚರಣೆಯ ನಮ್ಮ ಉದ್ದೇಶ ಈಡೇರದಿದ್ದರೂ ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ತಪ್ಪಿಸಿ ದಾಳಿಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಉಗ್ರರು ಎಚ್ಚರಿಕೆ ನೀಡಿದ್ದರು. ಈಗ ಉಗ್ರ ಶಾರಿಕ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಈತನ ಜನ್ಮ ಜಾಲಾಡಲಿದ್ದಾರೆ.