ಬ್ಲೂಟಿಕ್ ಪಡೆಯಲು 8 ಡಾಲರ್ ಶುಲ್ಕ ವಿಧಿಸಿದ್ದ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ ಸದ್ಯ ತನ್ನ ನಿರ್ಧಾರವನ್ನು ಅಮಾನತ್ತಿನಲ್ಲಿರಿಸಿದೆ. ನಕಲಿ ಖಾತೆಗಳ ಹಾವಳಿ ಮಿತಿಮೀರಿದ ಕಾರಣ ಚಂದಾದಾರಿಕೆ ಯೋಜನೆಯನ್ನು ಟ್ವಿಟರ್ ಅಮಾನತಿನಲ್ಲಿರಿಸಿದೆ. ಈಗಾಗಲೇ ಚಂದಾ ಮಾಡಿಕೊಂಡವರು ತಮ್ಮ ಖಾತೆಯ ದೃಢೀಕರಣ ಸೌಲಭ್ಯ ಹೊಂದಿರಲಿದ್ದಾರೆ. ಹೈಪ್ರೊಫೈಲ್ ಖಾತೆಗಳಿಗೆ ಅಧಿಕೃತ ಬ್ಯಾಜ್ ನೀಡುವ ವ್ಯವಸ್ಥೆಯನ್ನು ಕಂಪನಿ ಮರಳಿ ಜಾರಿಗೊಳಿಸಿದೆ. ಉದ್ದಿಮೆ ಮತ್ತು ಪ್ರಮುಖ ಮಾಧ್ಯಮ ಸಂಸ್ಥೆಗಳ ಖಾತೆಯ ಕೆಳ ಭಾಗದಲ್ಲಿ ಬೂದುಬಣ್ಣದ ಬ್ಯಾಜ್ ಕಾಣಿಸಲಿದೆ ಎಂದು ಮೂಲಗಳು ತಿಳಿಸಿವೆ. ಖಾತೆಯ ದೃಢೀಕರಣಕ್ಕೆ ಶುಲ್ಕ ಪಾವತಿ ಆಯ್ಕೆ ನೀಡಿದ ಬೆನ್ನಲ್ಲೇ ನಕಲಿ ಖಾತೆಗಳನ್ನು ನಿಭಾಯಿಸುವುದೂ ಟ್ವಿಟರ್ಗೆ ಸವಾಲಾಗಿ ಪರಿಣಮಿಸಿತ್ತು. ನಿಂಟೆಂಡೊ ಇಂಕ್ ಎಂಬ ಒಂದು ಖಾತೆಯಲ್ಲಿ ಸೂಪರ್ ಮಾರಿಯೋ ಅಶ್ಲೀಲ ಸಂದೇಶ ಪ್ರದರ್ಶಿಸುತ್ತಿರುವ ಚಿತ್ರ ಪ್ರಕಟಿಸಲಾಗಿತ್ತು. ಮತ್ತೊಂದು ಖ್ಯಾತ ಫಾರ್ಮಾ ಕಂಪನಿಯ ಹೆಸರಿನಲ್ಲಿ ಬೇರೆ ಯಾವುದೋ ನಕಲಿ ಖಾತೆ ಮೂಲಕ ಸುಳ್ಳು ಸಂದೇಶ ಹರಿಬಿಡಲಾಗಿತ್ತು. ಬಳಿಕ ಕಂಪನಿ ಕ್ಷಮೆಯಾಚಿಸಬೇಕಾಗಿ ಬಂದಿತ್ತು ಎಂದು ಮೂಲಗಳು ಹೇಳಿವೆ. ಇನ್ನೊಂದು ಖಾತೆಯಲ್ಲಿ ಟೆಸ್ಲಾದ ಸುರಕ್ಷತಾ ದಾಖಲೆಗಳನ್ನು ಪ್ರಶ್ನಿಸಿ ಗೇಲಿ ಮಾಡಲಾಗಿತ್ತು.