Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

'ಬಿ' ಖಾತಾ ಸ್ವತ್ತುಗಳು 'ಎ' ಖಾತಾ ಗೆ ವರ್ಗಾವಣೆ

'ಬಿ' ಖಾತಾ ಸ್ವತ್ತುಗಳು 'ಎ' ಖಾತಾ ಗೆ ವರ್ಗಾವಣೆ
bangalore , ಶುಕ್ರವಾರ, 29 ಏಪ್ರಿಲ್ 2022 (19:46 IST)
ಬೆಂಗಳೂರು: ನಗರದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಬಿ ಖಾತಾ ಸ್ವತ್ತುಗಳನ್ನ ಎ ಖಾತಾಗೆ ಬದಲಾಯಿಸಲು ಪಾಲಿಕೆ ಮುಂದಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ 6.16 ಲಕ್ಷ ಸ್ವತ್ತುಗಳು ಬಿ ಖಾತದಲ್ಲಿವೆ. ಬಿ ಯಿಂದ ಎ ಖಾತಾಗೆ ಸ್ವತ್ತುಗಳು ವರ್ಗಾವಣೆಗೊಂಡರೆ ಪಾಲಿಕೆಗೆ ಸಾವಿರಾರು ಕೋಟಿ ಆದಾಯ ಹರಿದು ಬರಲಿದೆ ಎನ್ನಲಾಗುತ್ತಿದೆ.
 
ಬಿಬಿಎಂಪಿಗೆ 2,500 ಕೋಟಿಗೂ ಅಧಿಕ ಆದಾಯದ ನಿರೀಕ್ಷೆಯಿದೆ. ಬಿ ಖಾತದಿಂದ ಎ ಖಾತಾ ನೀಡುವ ಸಂಬಂಧ ಶೀಘ್ರವೇ ಸರ್ಕಾರದಿಂದ ಮಾನದಂಡ ಪಟ್ಟಿ ಬಿಡುಗಡೆ ಆಗಲಿದೆ. ಚುನಾವಣೆಗೂ ಮೊದಲೇ ಖಾತಾ ವರ್ಗಾವಣೆ ಆರಂಭವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
 
ಪಾಲಿಕೆಯ ಕೇಂದ್ರ ವಲಯದ ಭಾಗದಲ್ಲಿನ ಸ್ವತ್ತುಗಳಿಗೆ ಚದರ ಮೀಟರ್ ಗೆ 200 ಹಾಗೂ ಹೊರ ವಲಯದಲ್ಲಿ 250 ರೂಪಾಯಿ ದರ ನಿಗಧಿಮಾಡುವ ಸಾಧ್ಯತೆ ಇದೆ. ಈ ದರ ನಿಗದಿಯಾದರೆ ನಗರದ ಒಳಗೆ 30X40 ಸೈಟ್ ಗೆ 22 ಸಾವಿರ ಹಾಗೂ ಹೊರ ಭಾಗದಲ್ಲಿ 27 ಸಾವಿರ ಶುಲ್ಕ ನಿಗದಿಯಾಗಲಿದೆ. ಈ ಸಂಬಂಧ ಪ್ರತಿಕ್ರಿಯೆಯನ್ನು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಚಾಲನೆ ನೀಡಿದ್ದಾರೆ ಎಂದಿದ್ದಾರೆ.
 
ಸರ್ಕಾರದ ಮಟ್ಟದಲ್ಲಿ ಚರ್ಚೆ:
 
ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ, ಸರ್ಕಾರದಿಂದ ಸ್ಪಷ್ಟ ಆದೇಶ ಬಂದ ನಂತರ  ನಿರ್ದೇಶನ ನೀಡಲಾಗುತ್ತದೆ, ಬಿ ಖಾತಾ ಇರುವ ಒಟ್ಟು ಆಸ್ತಿಗಳು 6 ಲಕ್ಷಕ್ಕೂ ಅಧಿಕ ಇದ್ದು ಅವುಗಳನ್ನ ಪರಿವರ್ತನೆ ಮಾಡುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ, ಸರ್ಕಾರದಿಂದ ಆದೇಶ ಬಂದ ನಂತರ ಆದಾಯ ಮತ್ತು ದಾಖಲೆ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
 
ಅಕ್ರಮ ಕಟ್ಟಡಗಳಿಗೆ ತಡೆ:
 
ಬಿ ಖಾತದಿಂದ ಎ ಖಾತ ಪರಿವರ್ತನೆ ಯಾಗುವುದರಿಂದ ಅಕ್ರಮ ಕಟ್ಟಡ ತಡೆಗಟ್ಟಲು ಸಹಾಯವಾಗುತ್ತದೆ. ಬಿ ಖಾತ ಸ್ವತ್ತಿನಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಕಡ್ಡಾಯವಲ್ಲ. ಎ ಖಾತಾ ಮಾಡಿದರೆ ನಿಗದಿ ಮಾಡಿದ್ದಕ್ಕಿಂತ ಅಧಿಕ ಅಂತಸ್ತು ನಿರ್ಮಾಣಕ್ಕೆ ಕಡಿವಾಣ ಬೀಳಲಿದೆ. 30X40 ಸ್ವತ್ತಿನಲ್ಲಿ ಗೌಂಡ್ ಫ್ಲೋರ್ ಸೇರಿದಂತೆ ಮೂರು ಅಂತಸ್ತಿಗೆ ಮಾತ್ರ ಅವಕಾಶವಿದೆ. ಆದರೆ ನಗರದಲ್ಲಿ 30X40 ಸೈಟ್ ನಲ್ಲಿ ಅದಕ್ಕೂ ಮೀರಿದ ಅಂತಸ್ತುಗಳ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.
 
ಕಟ್ಟಡ ಮಾಲೀಕರಿಗೆ ಅನುಕೂಲ:
 
ಬಿ ಖಾತ ಸ್ವತ್ತು ಎ ಖಾತ ವ್ಯಾಪ್ತಿಗೆ ಒಳಪಟ್ಟರೆ ಸ್ವತ್ತಿನ ಮಾಲೀಕರಿಗೂ ಅನುಕೂಲವಾಗಲಿದೆ. ಆದರೆ ಈ ಪ್ರಕ್ರಿಯೆಯಲ್ಲಿ  ಬಿಬಿಎಂಪಿಯ ಬೊಕ್ಕಸಕ್ಕೆ ನಷ್ಟ ಉಂಟು ಮಾಡದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಶೀಘ್ರದಲ್ಲಿಯೇ ಸ್ಪಷ್ಟ ನಿರ್ಧಾರ:
 
ಖಾತಾ ಬದಲಾವಣೆಯ ಸಂಬಂಧ ಚಿಂತನೆ ನಡೆಯುತ್ತಿದೆ. ಸರ್ಕಾರದ ಮಟ್ಟದಲ್ಲಿ ಹಲವು ಸಭೆ ನೆಡೆದಿದೆ. ಸ್ಪಷ್ಟವಾದ ಆದೇಶ ಬಂದ ನಂತರ ನಮ್ಮ ಅಧಿಕಾರಿಗಳಿಗೆ ನಿರ್ದೇಶನ ಕೊಡುತ್ತೆವೆ. ಬಿ ಖಾತಾ ಇರುವ ಒಟ್ಟು ಆಸ್ತಿಗಳು 6 ಲಕ್ಷಕ್ಕೂ ಅಧಿಕ ಇದೆ. ಪಾಲಿಕೆ ವ್ಯಾಪ್ತಿಯಲ್ಲಿ ಅವುಗಳನ್ನ ಪರಿವರ್ತನೆ ಮಾಡುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಆಸ್ತಿಯ ಮೌಲ್ಯ ಜಾಗದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಸರ್ಕಾರದಿಂದ ಆದೇಶ ಬಂದ ನಂತರ ಆದಾಯ, ದಾಖಲೆ ಬಗ್ಗೆ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಹೇಳುತ್ತೇವೆ ಎಂದು ಪಾಲಿಕೆಯ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್​​ನಲ್ಲೇ ಮಗನ ಶವ ಹೊತ್ತೊಯ್ದ ತಂದೆ..!