ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ಭಾನುವಾರ ಸಂಜೆ 5ಕ್ಕೆ ಹಮ್ಮಿಕೊಂಡಿದ್ದ ಟ್ವಿಟ್ಟರ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು,
ದೇಶದಲ್ಲಿ 35 ಟಾಪ್ ಹ್ಯಾಷ್ಟ್ಯಾಗ್ನಡಿ ಟ್ವಿಟ್ಟರ್ ಟ್ರೆಂಡಿಂಗ್ ಆಗಿದೆ. ದಶಕಗಳಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯ ಕೇಳಿಬರುತ್ತಿದೆ.
ಮಲೆನಾಡಿನ ತಾಲೂಕುಗಳ ಜನತೆ ತುರ್ತು ಅಥವಾ ಯಾವುದೇ ಚಿಕಿತ್ಸೆಗಾಗಿ ಹುಬ್ಬಳ್ಳಿ, ಬೆಳಗಾವಿ, ಕರಾವಳಿಯ ನಾಲ್ಕೂ ತಾಲೂಕಿನವರು ಉಡುಪಿ, ಮಂಗಳೂರು, ಕಾರವಾರದವರು ಗೋವಾ ರಾಜ್ಯದ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ.
ಅತಿಹೆಚ್ಚು ರಸ್ತೆ ಅಪಘಾತಗಳಾಗಿ, ಗಾಯಗೊಂಡವರನ್ನು ಆಸ್ಪತ್ರೆ ಸೇರಿಸುವ ಮುನ್ನವೇ ಅಸುನೀಗುತ್ತಿರುವ ಘಟನೆಗಳೇ ಹೆಚ್ಚು ಇರುತ್ತೆ.
ಹೀಗಾಗಿ 2019ರಲ್ಲಿ ಮೊದಲ ಬಾರಿಗೆ ಟ್ವಿಟ್ಟರ್ ಅಭಿಯಾನ ಹಮ್ಮಿಕೊಂಡಾಗ ಅಂದಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರೂ ಯಾವುದೇ ಕಾರ್ಯಗಳು ಆಗಿರಲಿಲ್ಲ.
ಈ ನಡುವೆ ಇತ್ತೀಚಿಗೆ ಶಿರೂರು ಟೋಲ್ ಗೇಟಿನಲ್ಲಿ ನಡೆದ ಆಂಬುಲೆನ್ಸ್ ಅಪಘಾತದಲ್ಲಿ ಜಿಲ್ಲೆಯ ನಾಲ್ವರು ದುರ್ಮರಣ ಹೊಂದಿದ್ದರು. ಈ ಪ್ರಕರಣದ ಬಳಿಕ ಮತ್ತೆ ಆಸ್ಪತ್ರೆಗಾಗಿ ಕೂಗು ಹೆಚ್ಚಾಗಿದ್ದು, ಹಂತಹಂತವಾಗಿ ಪ್ರತಿಭಟನೆಗಳನ್ನ ಹಮ್ಮಿಕೊಳ್ಳಲು ವಿವಿಧ ಸಂಘಟನೆಗಳು ಸಜ್ಜಾಗಿವೆ.