ರಾಜ್ಯ ಸರಕಾರದ ವತಿಯಿಂದ ನವೆಂಬರ್-10 ರಂದು ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿಯನ್ನು ಕೂಡಲೇ ಕೈಬಿಡಬೇಕು. ಕಳೆದ ವರ್ಷ ಟಿಪ್ಪು ಸುಲ್ತಾನ್ ಜಯಂತಿ ಸಂದರ್ಭದಲ್ಲಿ ಅನೇಕ ಗೊಂದಲ ಸೃಷ್ಟಿಯಾಗಿತ್ತು. ಈ ವರ್ಷ ಟಿಪ್ಪು ಜಯಂತಿ ಆಚರಿಸಲು ಬಿಟ್ಟರೇ ಮುಂದಿನ ದಿನಗಳಲ್ಲಿ ಬಿನ್ ಲಾಡೆನ್ ಜಯಂತಿಯನ್ನೂ ಆಚರಿಸುತ್ತಾರೆ ಎಂದು ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಾಜ್ಯ ಸರಕಾರದ ನಡೆಯನ್ನು ಟೀಕಿಸಿದರು.
ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಲು ಬಂದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಕ್ಯುಲರ್‌ವಾದಿಗಳ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ಏಜೆಂಟ್ ಆಗಿದ್ದಾರೆ. ಅವರಿಗೆ ತಾಕತ್ತಿದ್ದರೆ ಮಸೀದಿಯೊಳಗಿನ ಅಸ್ಪೃಶ್ಯತೆ ನಿವಾರಿಸಲಿ. ಉಡುಪಿ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದರೇ ಜೈಲಿಗೆ ಹೋಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನಕ ನಡೆಗೆ ನಮ್ಮ ಬೆಂಬಲವಿದೆ. ಹಾಗೂ ರಾಜ್ಯದಲ್ಲಿ ಶಾಂತಿ ಸಾಮರಸ್ಯ ಸಾಧಿಸಲು ನಾವೆಲ್ಲರೂ ಹೋರಾಡಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅಯೋಧ್ಯಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಾರೆ. ದೇಶದಲ್ಲಿ ಗೋ ಹತ್ಯೆ ನಿಷೇಧಿಸುತ್ತಾರೆ ಎನ್ನುವ ವಿಶ್ವಾಸ ಇದೆ. ಈ ದೇಶದಲ್ಲಿ ಇರಬೇಕಾದರೆ ಎಲ್ಲರೂ ಏಕರೂಪ ಕಾನೂನಿಗೆ ಬದ್ಧರಾಗಿರಬೇಕು ಎಂದು ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.