ಬೇರೆಲ್ಲೂ ಕಾಣಸಿಗದ ನಿಷ್ಠೆಯಿರುವ, ಬದ್ಧತೆಯಿರುವ ಲಕ್ಷಾಂತರ ಕಾರ್ಯಕರ್ತರು ಶ್ರೀಮಠಕ್ಕಿದ್ದು, ಅನೇಕ ವರ್ಷಗಳ ಪರಿಶ್ರಮದಿಂದ ಮಠವನ್ನು ಕಟ್ಟಿ ಬೆಳಸಲಾಗಿದೆ. ಇಂದು ಮಠವೆಂಬ ಕಲ್ಪವೃಕ್ಷವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಬೆಳೆಯನ್ನುಬೇಳೆದರಷ್ಟೇ ಸಾಲದು ಭದ್ರ ಬೇಲಿಯನ್ನೂ ಹಾಕಿ ಸಂರಕ್ಷಿಸಿಕೊಳ್ಳಬೇಕು ಎಂಬುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
ಮೂಲಮಠ ಗೋಕರ್ಣದ ಅಶೋಕೆಯಲ್ಲಿ ನಡೆದ ಗುರಿಕ್ಕಾರರ ಸಮಾವೇಶದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಕಳೆದ ಕೆಲವು ವರ್ಷಗಳಿಂದ ಶ್ರೀಮಠದ ಮೇಲೆ ನಿರಂತರವಾಗಿ ಆಕ್ರಮಣಗಳಾಗುತ್ತಿದ್ದು, ಸರ್ಕಾರೀ ವ್ಯವವಸ್ಥೆಯೂ ಕೂಡ ಅನಗತ್ಯವಾಗಿ ಪ್ರಹಾರವನ್ನು ಮಾಡುತ್ತಿದೆ. ಕಾನೂನನ್ನು ಗಾಳಿಗೆ ತೂರಿ ಮಠವನ್ನೇ ಸರ್ವನಾಶಮಾಡಲು ಹೊರಟಿದೆ. ಉನ್ನತ ರಾಜಕೀಯ ವ್ಯಕ್ತಿಗಳು ಹಾಗೂ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿರುವ ಕೆಲವು ಜನರು ಶ್ರೀಮಠದ ವಿರುದ್ಧ ವ್ಯವಸ್ತಿತ ದಾಳಿಯನ್ನು ಮಾಡುತ್ತಿದ್ದು, ಮಠದ ಬೆಳವಣಿಗೆಯ ಬಗ್ಗೆ ಅಸೂಯೆ ಇರುವ ಕೆಲವು ಮಠಗಳೂ ಇಂತಹ ನೀಚಕಾರ್ಯದಲ್ಲಿ ಕೈಜೋಡಿಸಿರುವ ಶಂಕೆ ಇದೆ ಎಂದು ಹೇಳಿದರು.
1300 ವರ್ಷಗಳ ಇತಿಹಾಸವಿರುವ ಶ್ರೀಮಠ ಧರ್ಮದ ಹಾದಿಯನ್ನು ಎಂದಿಗೂ ಬಿಟ್ಟಿಲ್ಲ. ನೈತಿವಾಗಿ ಅಥವಾ ಕಾನೂನಾತ್ಮಕವಾಗಿ ನಮ್ಮ ಮಠದಲ್ಲಿ ಯಾವುದೇ ತಪ್ಪನ್ನು ಹುಡುಕಲು ಸಾಧ್ಯವಿಲ್ಲ. ಹತ್ತು ವರ್ಷಗಳಲ್ಲಿ ಹತ್ತು ರೂಪಾಯಿಯ ವ್ಯತ್ಯಾಸವನ್ನೂ ನಮ್ಮ ಮಠದಲ್ಲಿ ಕಾಣಲು ಸಿಗುವುದಿಲ್ಲ. ಹೀಗಿದ್ದರೂ ಮಠವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ನಮ್ಮ ಮೇಲಾದ ಮಿಥ್ಯಾರೋಪಗಳ ಹಿಂದೆಯೂ ಮಠವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿಯೇ ನಡೆದದ್ದಾಗಿದ್ದು, ಈ ಎಲ್ಲಾ ವಿಫಲ ಪ್ರಯತ್ನದ ಹಿಂದೆ ಕೆಲವು ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಮಾಯಾಸಮರ ಮಾಡುತ್ತಿರುವವರು ಬೆಳಕಿಗೆ ಬಂದು ಎದುರಿಸಲು ಎಂದರು.
ಉಚ್ಚನ್ಯಾಯಾಲಯದಲ್ಲಿ ದಾಖಲಾದ PIL ನಲ್ಲಿ ಎಲ್ಲಾ ಮಠಗಳನ್ನೂ ನಿಯಂತ್ರಿಸುವಂತೆ ಕೋರಲಾಗಿದೆ, ಅದೇ ದೂರು ಸರ್ಕಾರದ ಬಳಿ ಬರುತ್ತಿದ್ದಂತೆ ಶ್ರೀರಾಮಚಂದ್ರಾಪುರಮಠದ ವಿಷಯ ಮಾತ್ರ ಪ್ರಸ್ತಾಪವಾಗಿದೆ. ಇದನ್ನು ಗಮನಿಸಿದರೆ ಶ್ರೀಮಠದ ಮೇಲೆ ಆಕ್ರಮಣ ನಡೆಯುತ್ತಿರುವುದು ಸ್ಪಷ್ಟವಾಗುತ್ತದೆ ಎಂದ ಶ್ರೀಗಳು ಪ್ರಪಂಚವೇ ಎದುರಾದರೂ ಮಠದ ಅಭಿಮಾನಿ ಬಳಗ ಒಟ್ಟಾಗಿ ಎದುರಿಸಲಿದೆ ಎಂದು ಕರೆನೀಡಿದರು.
ಇದೇ ಸಂದರ್ಭದಲ್ಲಿ ಶ್ರೀಮಠದ ಎಲ್ಲಾ ಗುರಿಕ್ಕಾರರಿಗೂ ವಿಶಿಷ್ಟವಾದ ರಾಮಮುದ್ರೆಯನ್ನು ಅನುಗ್ರಹಿಸಿದ ಶ್ರೀಗಳು, ಸಮಾಜವನ್ನು ಎಚ್ಚರಿಸುವಂತೆ ಸಂದೇಶ ನೀಡಿದರು. ಗೋಕರ್ಣಮಂಡಲದ ಎಲ್ಲಾ ಭಾಗಗಳ ಗುರಿಕ್ಕಾರರು, ಶ್ರೀಮಠದ ಪದಾಧಿಕಾರಿಗಳು ಸಮಾವೇಶದಲ್ಲಿ ಉಪಸ್ಥಿತರಿದ್ದು ಶ್ರೀಗಳಿಂದ ಅನುಗ್ರಹ ಪಡೆದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ