ಗಡಿಗಳಿಂದ ರೈತರನ್ನು ಹೊರಹಾಕಲು ಯತ್ನಿಸಿದರೆ, ಸರ್ಕಾರಿ ಕಚೇರಿಗಳು ಮಾರುಕಟ್ಟೆಗಳಾಗುತ್ತವೆ: ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್ ನವೆಂಬರ್ 26ರವರೆಗೆ ಸಮಯ ಕೊಡುತ್ತೇವೆ. ಅಷ್ಟರೊಳಗೆ ಕೇಂದ್ರ ಸರ್ಕಾರವು ವಿವಾದಾತ್ಮಕ ಕೃಷಿ ಕಾನೂನನ್ನು ಹಿಂತೆಗೆದುಕೊಳ್ಳದಿದ್ದರೆ ದೆಹಲಿ ಗಡಿಗಳಲ್ಲಿ ರೈತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಹನ್ನೊಂದು ತಿಂಗಳುಗಳಿಂದ ರೈತರು ದೆಹಲಿ ಗಡಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ದ ಹೋರಾಟ ನಡೆಸುತ್ತಿದ್ದಾರೆ. ಇದೇ ನವೆಂಬರ್ 26ಕ್ಕೆ ರೈತ ಹೋರಾಟ ಒಂದು ವರ್ಷವನ್ನು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
“ಕೇಂದ್ರ ಸರ್ಕಾರಕ್ಕೆ ನವೆಂಬರ್ 26 ರವರೆಗೆ ಸಮಯವಿದೆ. ಅದರ ನಂತರ (ನವೆಂಬರ್ 27 ರಿಂದ) ಇನ್ನೂ ಹೆಚ್ಚಿನ ಸಂಖ್ಯೆಯ ರೈತರು ಹಳ್ಳಿಗಳಿಂದ ಟ್ರ್ಯಾಕ್ಟರ್‌ಗಳ ಮೂಲಕ ದೆಹಲಿ ಸುತ್ತಲೂ ನಡೆಯುತ್ತಿರುವ ಪ್ರತಿಭಟನಾ ಸ್ಥಳಗಳಗೆ (ದೆಹಲಿ ಗಡಿಗಳು) ತಲುಪುತ್ತಾರೆ. ಪ್ರತಿಭಟನೆಯ ಸ್ಥಳವನ್ನು ಬೃಹತ್ ಕೋಟೆಯನ್ನಾಗಿ ಬಲಪಡಿಸುತ್ತಾರೆ” ಎಂದು ಟಿಕಾಯತ್ ಟ್ವೀಟ್ ಮಾಡಿದ್ದಾರೆ.
ಎರಡು ದಿನಗಳಲ್ಲಿ ಕೇಂದ್ರಕ್ಕೆ ಇದು ಎರಡನೇ ಎಚ್ಚರಿಕೆಯಾಗಿದೆ. ದೆಹಲಿ ಗಡಿಯಿಂದ ಪ್ರತಿಭಟನಾಕಾರರನ್ನು ಬಲವಂತವಾಗಿ ತೆರವುಗೊಳಿಸಲು ಪ್ರಯತ್ನಿಸಿದರೆ ಸರ್ಕಾರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟಿಕಾಯತ್ ಭಾನುವಾರ ಎಚ್ಚರಿಕೆ ನೀಡಿದ್ದರು.
ಕಳೆದ ವರ್ಷ ಜಾರಿಗೆ ತಂದ ಮೂರು ಕಾನೂನುಗಳು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಕಳೆದ ವರ್ಷ ನವೆಂಬರ್ 26 ರಿಂದ ರೈತರು ದೆಹಲಿಯ ಮೂರು ಗಡಿ ಬಿಂದುಗಳಾದ ಟಿಕ್ರಿ, ಸಿಂಘು ಮತ್ತು ಗಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ನಿರತ ರೈತರ ಮೇಲೆ ಹಲವು ಭಾರೀ ದಾಳಿಗಳು ನಡೆದಿವೆ. ಸುಮಾರು 500ಕ್ಕೂ ರೈತರು ಪ್ರತಿಭಟನಾ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.