ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರೂ ಹಿಂದೂ ಧರ್ಮದ ಪ್ರತಿಪಾದಕರು. ವಿಶ್ವಗುರು ಬಸವಣ್ಣ ಹಾಗೂ ಡಾ.ಅಂಬೇಡ್ಕರ್ ಅವರ ಸಿದ್ಧಾಂತ ಪಾಲಿಸುವವರು ಬಿಜೆಪಿಗೆ ಹೋಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರಿಗೆ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್, ಬಜರಂಗದಳ ಹಾಗೂ ಬಿಜೆಪಿಯವರು ಸಾಮಾಜಿಕ ನ್ಯಾಯದ ಪರವಾಗಿಲ್ಲ. ಹಿಂದೂ ಧರ್ಮದಲ್ಲಿ ಸಮಾನತೆ ಇದೆಯೇ?. ಅದಕ್ಕೆ, ವಿಶ್ವಗುರು ಬಸವಣ್ಣ ಮತ್ತು ಡಾ.ಅಂಬೇಡ್ಕರ್ ಅವರು ಹಿಂದು ಧರ್ಮವನ್ನು ತೊರೆದದ್ದು, ಆದರೆ, ಕೆಲವರು ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ಬಿಜೆಪಿ ಜೊತೆ ಹೋಗುತ್ತಿದ್ದಾರೆ ಎಂದು ಹೆಸರು ಹೇಳದೆ ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ.
ಎಚ್‌ಡಿಕೆ ಕಾಲೆಳೆದ ಸಿಎಂ.........
ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ. ಇಲ್ಲವಾದ್ರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳುತ್ತಾರೆ. ಆದರೆ, ಅವರ ಬಳಿ ಅಧಿಕಾರವೇ ಇಲ್ಲ. ಮತ್ತೆ ಯಾವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್‌ಡಿಕೆ ಕಾಲೆಳೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯ 20 ತಿಂಗಳ ಆಡಳಿತ ನೋಡಿದ್ದೇವೆ. ಮೊದಲು ಅಧಿಕಾರಕ್ಕೆ ಬರಬೇಕು ಅನಂತರ ಮಾತನಾಡಬೇಕು. ಅಧಿಕಾರವೇ ಇಲ್ಲದೆ ಯಾವ ಸ್ಥಾನಕ್ಕೆ ರಾಜೀನಾಮೆ ನೀಡ್ತಿರೋ ಎಂದು ಲೇವಡಿ ಮಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ