ಬೆಂಗಳೂರು : ರಾಜ್ಯದ 15 ವಿಧಾನಸಭೆ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಈ ನಡುವೆ ನನ್ನ ಕ್ಷೇತ್ರದಲ್ಲಿ ಚುನಾವಣೆಯೇ ನಡೆಯಲ್ಲ ಎಂದು ಅನರ್ಹ ಶಾಸಕ ಆರ್.ಶಂಕರ್ ಹೇಳಿದ್ದಾರೆ.
ರಾಣೆಬೆನ್ನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಆರ್.ಶಂಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಪ್ರಾಥಮಿಕ ಸದಸ್ಯತ್ವ ಪಡೆದಿದ್ದರು. ಆದರೆ ಬಳಿಕ ಪಕ್ಷಕ್ಕೆ ರಾಜೀನಾಮೆ ನೀಡಿ ಅನರ್ಹರೆಂದು ಘೋಷಿಸಲ್ಪಟ್ಟಿದ್ದಾರೆ.
ಈಗಾಗಲೇ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆರ್.ಶಂಕರ್ , ನನ್ನ ಕ್ಷೇತ್ರದಲ್ಲಿ ಚುನಾವಣೆಯೇ ನಡೆಯಲ್ಲ. ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. ಇಂದು ಚುನಾವಣೆಗೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಮಾಡ್ತೇನೆ. ನನ್ನ ಪರವಾಗಿ ಪ್ರತ್ಯೇಕ ವಕೀಲರು ವಾದ ಮಾಡ್ತಿದ್ದಾರೆ. ನಾನು ಕಾಂಗ್ರೆಸ್ ಸೇರುವ ಪ್ರಕ್ರಿಯೆ ಪೂರ್ಣವಾಗಿಲ್ಲ ಆದ್ದರಿಂದ ನನ್ನನ್ನು ಅರ್ನಹನೆಂದು ಗೋಷಿಸುವ ಹಾಗಿಲ್ಲ ಎಂದು ಹೇಳಿದ್ದಾರೆ.