ಧಾರವಾಡ : ರಾಜನ ಕರ್ತವ್ಯದ ಬಗ್ಗೆ, ರಾಜಕಾರಣದ ಬಗ್ಗೆ ತಿಳಿಸಿದ ವೇದವ್ಯಾಸರೊಬ್ಬರೇ ನಮ್ಮ ದೇಶದ ರಾಷ್ಟ್ರಪಿತ. ಉಳಿದವರು ಅನೇಕ ದೊಡ್ಡ ವ್ಯಕ್ತಿಗಳಿದ್ದರೂ ಅವರೆಲ್ಲ ರಾಷ್ಟ್ರಪುತ್ರರು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಮಹಾಭಾರತದಲ್ಲಿ ಎಲ್ಲವೂ ಅಡಗಿದೆ. ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ತತ್ವಶಾಸ್ತ್ರ, ವೇದಾಂತ ಹೀಗೆ ಎಲ್ಲವನ್ನೂ ವೇದವ್ಯಾಸರು ಮಹಾಭಾರತದ ಮೂಲಕ ಹೇಳಿಕೊಟ್ಟಿದ್ದಾರೆ. ರಾಜಕಾರಣ ಹೇಗಿರಬೇಕು. ರಾಜನಾದವರು ದೇಶ ಪರಿಪಾಲನೆ ಹೇಗೆ ಮಾಡಬೇಕು ಎಂಬುದೆಲ್ಲವನ್ನೂ ವೇದವ್ಯಾಸರು ಮಹಾಭಾರತದ ಮೂಲಕ ಪರಿಚಯ ಮಾಡಿಕೊಟ್ಟಿದ್ದಾರೆ. ಹೀಗಾಗಿ ವೇದವ್ಯಾಸರೊಬ್ಬರೇ ದೇಶದ ರಾಷ್ಟ್ರಪಿತ ಎಂದು ಹೇಳಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾಗಿ ಕಳೆದ ಐದು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳಿಂದಾಗಿ ಎರಡನೇ ಬಾರಿಗೆ ಅಧಿಕಾರಕ್ಕೆ ಬರುತ್ತಿದ್ದು, ಈ ಅವಧಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ ಎಂಬ ವಿಶ್ವಾಸ ತಮಗಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.