ಉಡುಪಿ : ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದಾಗ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಮಹಾರಾಷ್ಟ್ರದ ಅರಬ್ಬೀ ಸಮುದ್ರದ ಮಲ್ವಾನ್ ಪ್ರದೇಶದಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಡಿಸೆಂಬರ್ 13 ರಂದು ಉಡುಪಿ ಜಿಲ್ಲೆಯ ಮಲ್ಪೆಯಿಂದ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಕಾಣೆಯಾಗಿತ್ತು. ಮಾಲೀಕ ಉಡುಪಿಯ ಚಂದ್ರ ಶೇಖರ, ಮೀನುಗಾರರಾದ ದಾಮೋದರ, ಲಕ್ಷ್ಮಣ್, ಸತೀಶ್ ರವಿ, ಹರೀಶ್, ರಮೇಶ್, ಜೋಗಯ್ಯ ಎಂಬವರು ಕಾಣೆಯಾಗಿದ್ದರು.
ಮೀನುಗಾರರನ್ನು ಹುಡುಕಿ ಕೊಡುವಂತೆ ಮಲ್ಪೆ ಸೇರಿದಂತೆ ಕರಾವಳಿಯ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಡ ತಂದಿದ್ದ ಹಿನ್ನಲೆಯಲ್ಲಿ ತನಿಖಾ ತಂಡಗಳು ಸಟಲೈಟ್ ತಂತ್ರಜ್ಞಾನ, ನೌಕಾದಳದ ಸಿಬ್ಬಂದಿಗಳ ಮೂಲಕ ಹುಡುಕಾಟ ನಡೆಸಲಾಗಿತ್ತು. ಆದರೆ ಅರಬ್ಬೀ ಸಮುದ್ರದಲ್ಲಿ ಯಾವುದೇ ಅವಶೇಷಗಳಾಗಲಿ, ಶವವಾಗಲಿ ಸಿಗದ ಕಾರಣ ಉಗ್ರವಾದಿಗಳು ಅಥವಾ ಕಡಲಗಳ್ಳರು ಅಪಹರಿಸಿದ ಶಂಕೆ ವ್ಯಕ್ತಪಡಿಸಲಾಗಿತ್ತು.
ಆದರೆ ನೌಕದಳ ಸಿಬ್ಬಂದಿಗಳು ಸತತ ಹುಡುಕಾಟ ನಡೆಸಿದ ನಂತರ ಇದೀಗ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಮಹಾರಾಷ್ಟ್ರದ ಅರಬ್ಬೀ ಸಮುದ್ರದ ಮಲ್ವಾನ್ ಪ್ರದೇಶದಲ್ಲಿ ಪತ್ತೆಯಾಗಿದ್ದು, ಈ ವಿಚಾರ ಭಾರತೀಯ ನೌಕದಳದ ವಕ್ತಾರ ಟ್ವೀಟ್ ಮೂಲಕ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.