ರಾಜ್ಯದ ಬಿಸಿಲುನಗರಿಯಲ್ಲಿ ಬೆಳೆಯುವ ತೊಗರಿಗೆ ಈಗ ಮತ್ತಷ್ಟು ಮಹತ್ವ ಬಂದಿದೆ.
ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಗೆ ಜಿಐ ಮಾನ್ಯತೆ ಸಿಕ್ಕಿರುವುದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೊಗರಿ ತನ್ನದೇಯಾದ ಛಾಪು ಮೂಡಿಸಲಿದೆ. ಹೀಗಂತ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮಾರುಕಟ್ಟೆ, ಖರೀದಿ ಮತ್ತು ಬೆಲೆಗಳ ವಿಚಾರದ ಬಗ್ಗೆ ತಜ್ಞರು, ರೈತರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ್ರು.
ಸಾವಯವ ಗೊಬ್ಬರ ಬಳಕೆ ಮಾಡುವ ಮೂಲಕ ಉತ್ತಮ ಗುಣಮಟ್ಟದ ತೊಗರಿ ಬೆಳೆಯನ್ನು ಬೆಳೆಯಬೇಕು ಎಂದ್ರು.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಕೆಲ ರೈತರು ಹವಾಮಾನ ಆಧಾರಿತ ತೋಟಗಾರಿಕಾ ಬೆಳೆ ಪದ್ಧತಿ ಮಾಡುತ್ತಿದ್ದು, ಈ ಹವಾಮಾನ ಆಧಾರಿತ ಬೆಳೆಗೆ ಮಾತ್ರ ಬೆಳೆ ವಿಮೆ ನೀಡಲಾಗುತ್ತದೆ ಎಂದ್ರು.
ಒಂದು ವೇಳೆ ಹವಾಮಾನದಲ್ಲಿ ಏರು-ಪೇರು ಉಂಟಾಗಿ ಎಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ಮೀಟರ್‍ನಲ್ಲಿ ವರದಿಯಾಗುತ್ತದೆ. ಅದರ ಆಧಾರದ ಮೇಲೆ ರೈತರಿಗೆ ಬೆಳೆ ವಿಮೆ ನೀಡಲಾಗುತ್ತದೆ ಎಂದ ಅವರು, ಬೆಳೆ ವಿಮೆ ಬಗ್ಗೆ ಇದ್ದ ಗೊಂದಲವನ್ನು ಪರಿಹರಿಸಿದರು.
3 ತಿಂಗಳ ಬೆಳೆಯಾದ ಹೆಸರಿಗೆ 7150 ರೂ. ಬೆಲೆ ನಿಗದಿ ಮಾಡಲಾಗಿದೆ. ಆರು ತಿಂಗಳಲ್ಲಿ ಬರುವ ತೊಗರಿ ಬೆಳೆಗೆ 5 ಸಾವಿರ ರೂ. ಬೆಲೆ ನಿಗದಿ ಮಾಡಲಾಗಿದೆ. ಈ ಮೂಲಕ ರೈತರು ಬೆಳೆದ ಬೆಳೆಗಳಿಗೆ ಬೆಲೆ ನಿಗದಿ ಮಾಡಬೇಕು ಎನ್ನುವ ಅನ್ನದಾತರ ಬಹುದಿನದ ಬೇಡಿಕೆ ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದ್ರು.