ಶಿವಮೊಗ್ಗದಲ್ಲೂ ಮಳೆ ಅಬ್ಬರ ಮುಂದುವರೆದಿದೆ. ಸತತವಾಗಿ ಸುರಿಯುತ್ತಿರುವ ಮಳೆಗೆ ತೀರ್ಥಹಳ್ಳಿ ತಾಲೂಕಿನ ವಿಠ್ಠಲ ನಗರದಲ್ಲಿರುವ ದಲಿತ ಕಾಲೋನಿಯಲ್ಲಿ ಮನೆ ಗೋಡೆ ಕುಸಿದಿದೆ. ಶಾರದಾ ಎಂಬುವರ ಮನೆಯ ಗೋಡೆ ಕುಸಿದಿದ್ದು, ಗೋಡೆ ಕುಸಿತದ ರಭಸಕ್ಕೆ ಮನೆಯಲಿದ್ದ ಪೀಠೋಪಕರಣ ಸಂಪೂರ್ಣ ನಾಶಗೊಂಡಿದೆ, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು -ನೋವು ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಸೂಕ್ತ ಪರಿಹಾರದ ಭರವಸೆಯನ್ನು ನೀಡಿದ್ದಾರೆ. ಹಾಗೆಯೇ ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾದ ಹಿನ್ನೆಲೆ ಲಿಂಗನಮಕ್ಕಿ ಜಲಾಶಯ ಬಹುತೇಕ ಭರ್ತಿಯಾಗಿದ್ದು,ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ದಿನೇ ದಿನೇ ನೀರಿನ ಮಟ್ಟವು ಏರಿಕೆಯಾಗುತ್ತಿದ್ದು, ನೀರಿನ ಹರಿವು ಹೀಗೆ ಮುಂದುವರೆದಲ್ಲಿ ಗರಿಷ್ಟ ಮಟ್ಟ ತಲುಪುವ ಸಾಧ್ಯತೆ ಹೆಚ್ಚಾಗಿದೆ. ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಾದರೂ ಹೊರಬಿಡುವ ಸಾಧ್ಯತೆ ಇದೆ. ಇದರಿಂದಾಗಿ ಕೆಪಿಸಿಯಿಂದ ಎರಡನೇ ಮುನ್ನೆಚ್ಚರಿಕೆ ಸೂಚನೆ ಹೊರಬಂದಿದ್ದು, ನದಿಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ.