ತುಮಕೂರು-ಜಾತಿಗಣತಿ ವರದಿಗೆ ತುಮಕೂರು ಜಿಲ್ಲೆಯ ಹಲವು ಮಠಾಧಿಪತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಬೆಟ್ಟದಹಳ್ಳಿ ಮಠದ ಚಂದ್ರಶೇಖರ್ ಚಂದ್ರಶೇಖರ್ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ ಹಾಗೂ ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ದೇಸಿಕೇಂದ್ರ ಸ್ವಾಮೀಜಿಯಿಂದ ಜಾತಿಗಣತಿ ವರದಿಗೆ ವಿರೋಧ ವ್ಯಕ್ತವಾಗಿದೆ. ತುಮಕೂರು ನಗರದ ಮುರುಘಾ ರಾಘವೇಂದ್ರ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೂವರೂ ಮಠಾಧಿಪತಿಗಳು ಜಾತಿಗಣತಿಯನ್ನು ವಿರೋಧಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿರುವ ಮಠಾಧಿಪತಿಗಳು, ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದೆ. ಇದುವರೆಗೂ ಯಾರೂ ನಮ್ಮನ್ನು ಬಂದು ಮಾಹಿತಿ ಕೇಳಿಲ್ಲ. ನಮ್ಮ ಮಠದ ಅಕ್ಕಪಕ್ಕದ ಮನೆಗಳಲ್ಲೂ ಮಾಹಿತಿ ಕೇಳಿಲ್ಲ . ಹೀಗಾಗಿ ಈ ವರದಿ ವೈಜ್ಞಾನಿಕವಾಗಿದೆ ಎಂದು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜೊತೆಗೆ, ಜಾತ್ಯಾತೀತ ಪಕ್ಷ ಎನ್ನುವ ಸರ್ಕಾರವೇ ಜಾತಿ ಲೆಕ್ಕ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಮಠಾಧಿಪತಿಗಳು ಜಾತಿ ಭೇದ ಇಲ್ಲದೇ ಎಲ್ಲಾ ಸಮುದಾಯದಲ್ಲಿರುವ ಆರ್ಥಿಕವಾಗಿ ಕೆಳವರ್ಗದ ಬಡವರ ಲೆಕ್ಕ ಹಾಕಲಿ. ಎಲ್ಲಾ ಸಮುದಾಯದ ಬಡವರಿಗೆ ಸವಲತ್ತು ಸಿಗಲಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಾತಿಗಣತಿ ವರದಿಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಹಾಸನದ ಭೇಟಿಯ ವೇಳೆ ಪತ್ರಕರ್ತರೊಂದಿಗೆ ಪ್ರತಿಕ್ರಿಯಿಸಿದ ಅವರು , ಜಾತಿಗಣತಿ ಸರಿಯಿಲ್ಲ ಎಂಬ ಅಭಿಪ್ರಾಯವಿದ್ದರೆ ಮಠಾಧಿಪತಿಗಳು ಈ ಹಿಂದೆಯೇ ಯಾಕೆ ವಿರೋಧಿಸಲಿಲ್ಲ ಎಂದು ಪ್ರಶ್ನಿಸಿದರು. ಜಯಪ್ರಕಾಶ್ ಹೆಗಡೆ ಅವರ ಸಮಿತಿ ಜಾತಿಗಣತಿಯ ವರದಿಯನ್ನು ಸರ್ಕಾರಕ್ಕೆ ನೀಡಿದೆ. ಈ ವರದಿಯನ್ನು ಕ್ಯಾಬಿನೆಟ್ ಸಭೆಯಲ್ಲಿ ಪರಿಶೀಲಿಸಿ ಚರ್ಚೆ ನಡೆಸಲಾಗುವುದು. ಬಳಿಕ ಅದರ ಅನುಷ್ಠಾನದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಲೋಕಸಭಾ ಚುನಾವಣೆಯ ಅಭ್ಯರ್ಥಿಯ ಬಗ್ಗೆ ಪ್ರತಿಕ್ರಿಯಿಸಿ, ಹಾಸನದ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲವೂ ಎಲ್ಲಿ ಒಮ್ಮತದ ನಿರ್ಧಾರದ ಮೇಲೆ ನಡೆಯುತ್ತದೆ. ಶೀಘ್ರದಲ್ಲೇ ಅಭ್ಯರ್ಥಿಯನ್ನ ಘೋಷಿಸಲಾಗುವುದು ಎಂದು ಸಿಎಂ ಹೇಳಿದರು.