ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದೆ. ಹೈಕಮಾಂಡ್ ಕೂಡ ಈ ಬಗ್ಗೆ ಪತ್ರ ಬರೆದು ಸ್ಪಷ್ಟಪಡಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿಗಳ 1 ಲಕ್ಷ ಮನೆಗಳ ನಿರ್ಮಾಣ ಯೋಜನೆಯನ್ನು ಬೆಂಗಳೂರಿನಲ್ಲಿ ಅನುಷ್ಠಾನಕ್ಕೆ ತರುವ ಸಂಬಂಧ ಇಂದು ವಿಧಾನಸೌಧದಲ್ಲಿ ವಸತಿ ಸಚಿವ ಕೃಷ್ಣಪ್ಪ, ಕಾರ್ಮಿಕ ಸಚಿವ ಸಂತೋಷ್‌ಲಾಡ್ ಹಾಗೂ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ, ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದೆ. ಹೈಕಮಾಂಡ್ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಎಂದು ಪತ್ರ ಬರೆದಿದೆ. ಈ ವಿಚಾರದಲ್ಲಿ ಯಾರಿಗೂ ಗೊಂದಲ ಬೇಡ ಎಂದರು.
ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ 100ಕ್ಕೆ 100 ರಷ್ಟು ನಾವೆ ಗೆಲ್ಲುತ್ತೇವೆ. ಯಾರಿಗೂ ಈ ವಿಚಾರದಲ್ಲಿ ಅನುಮಾನ ಬೇಡ ಎಂದರು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟೇ ಹಣ ಖರ್ಚು ಮಾಡಿದರೂ ಅವರನ್ನು ನಾವು ಸೋಲಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ್ದಾರೆ. ಕ್ಷೇತ್ರದಲ್ಲಿ 2 ಲಕ್ಷ ಮತದಾರರು ಕುಮಾರಸ್ವಾಮಿ ಜೇಬಲ್ಲಿದ್ದಾರೆಯೇ? ಎಂದು ಮರು ಪ್ರಶ್ನೆ ಹಾಕಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಸೋಲು-ಗೆಲುವನ್ನು ಕುಮಾರಸ್ವಾಮಿ ತೀರ್ಮಾನ ಮಾಡಲು ಬರುವುದಿಲ್ಲ. ಮತದಾರರು ತೀರ್ಮಾನಿಸಲಿದ್ದಾರೆ. ನಿಮ್ಮ ವಿರೋಧಿಗಳೆಲ್ಲಾ ನಿಮ್ಮನ್ನು ಸೋಲಿಸಲು ಒಂದಾಗಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ನನ್ನ ವಿರೋಧಿಗಳು ಒಂದಾದಾಗೆಲ್ಲಾ ಅದು ನನಗೆ ಪ್ಲಸ್ ಪಾಯಿಂಟ್. ಮುಂದಿನ ಚುನಾವಣೆಯಲ್ಲಿ ಗೆಲುವು ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿಭೇಟಿಮುಂದೂಡಿಕೆ
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನ. 19ರಿಂದ ಮೂರು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮ ಮುಂದೂಡಲಾಗಿದೆ. ನಿರ್ಧಿಷ್ಟ ಕಾರಣ ಗೊತ್ತಿಲ್ಲ. ಅವರ ರಾಜ್ಯ ಪ್ರವಾಸ ದಿನಾಂಕ ನಿಗದಿಯಾದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯಲಿದೆ. ಆ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡುವುದು ಬೇಡ ಎಂದು ಅವರಿಗೆ ನಾನು ಮನವಿ ಮಾಡಿದ್ದೆ. ಅವರ ರಾಜ್ಯ ಭೇಟಿ ಮುಂದೂಡಿಕೆಗೆ ಇದೂ ಒಂದು ಕಾರಣವಾಗಿರಬಹುದು ಎಂದರು.