ರಾಜ್ಯದಲ್ಲಿ ಒಂದೆಡೆ ಭಾರಿ ಮಳೆ ಇದ್ದರೆ ಮತ್ತೊಂದೆಡೆ ಮಳೆಯಿಲ್ಲದೇ ಬೆಳೆ ಹಾನಿಗೆ ಒಳಗಾಗುತ್ತಿವೆ. ಹೀಗಾಗಿ ಬೆಳೆ ಹಾನಿ ಕುರಿತು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸುವಂತೆ ಕಂದಾಯ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಲಬುರಗಿ ವಿಭಾಗ ಸೇರಿದಂತೆ ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ವಾಡಿಕೆಯಂತೆ ಈ ವರ್ಷ ಮಳೆಯ ಕೊರತೆಯಿದೆ. ಬೆಳೆ ಹಾನಿಯ ಕುರಿತಂತೆ ಎಲ್ಲ ಜಿಲ್ಲೆಗಳಲ್ಲಿ ಶೀಘ್ರವೇ ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ಕಲಬುರಗಿ ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಮೇ ಮತ್ತು ಜೂನ್‍ನಲ್ಲಿ ಉತ್ತಮ ಮಳೆಯಾಗಿತ್ತು. ಮುಂದೆಯೂ ಮಳೆ ಬರುವ ನಿರೀಕ್ಷೆಯಿಂದ ರೈತರು ಉದ್ದು, ಹೆಸರು, ಎಳ್ಳು, ತೊಗರಿ ಬಿತ್ತನೆ ಮಾಡಿದ್ದರು. ಜಿಲ್ಲೆಯಲ್ಲಿ ಒಟ್ಟಾರೆ ಶೇ. 98ರಷ್ಟು ಬಿತ್ತನೆಯಾಗಿದ್ದು, ಇದರಲ್ಲಿ ಬಿತ್ತನೆ ಮಾಡಲಾದ ಹೆಸರು, ಎಳ್ಳು, ಉದ್ದು ಬೆಳೆಗಳು ಮಳೆಯ ಅಭಾವದಿಂದ ಹಾಳಾಗಿದೆ.
ಇದಕ್ಕೆ ಪರ್ಯಾಯವಾಗಿ ಬೆಳೆ ಬೆಳೆಯಲು ಮುಂದೆ ಬರುವ ರೈತರಿಗೆ ಸಮರ್ಪಕವಾಗಿ ಬೀಜ ಮತ್ತು ಗೊಬ್ಬರವನ್ನು ಪೂರೈಸಲು ಕೂಡಲೇ ಅಗತ್ಯ ಪ್ರಮಾಣದ ದಾಸ್ತಾನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆಯಿಲ್ಲದೇ ಈ ಭಾಗದ ರೈತರ ಬೆಳೆ ಹಾನಿಗೊಳಗಾಗುತ್ತಿದೆ ಎಂದರು.