ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಚಳಿಗಾಲ ಅಧಿವೇಶನದ 2ನೇ ದಿನವಾದ ಇಂದು ಸುವರ್ಣ ವಿಧಾನಸೌಧದಲ್ಲಿ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ್ದೇ ಚರ್ಚೆ ಜೋರಾಗಿತ್ತು.
ಪ್ರತಿಯೊಬ್ಬರ ಚಿತ್ತ ಚುನಾವಣಾ ಫಲಿತಾಂಶದತ್ತ ನೆಟ್ಟಿತ್ತು. ಕ್ಷಣಕ್ಷಣಕ್ಕೂ ಚುನಾವಣಾ ಫಲಿತಾಂಶಗಳ ಮಾಹಿತಿಗಳನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರುಗಳು ಪಡೆದುಕೊಳ್ಳುತ್ತಿದ್ದದ್ದು ಕಂಡು ಬಂತು.
ವಿಧಾನಸಭೆಯ ಮೊಗಸಾಲೆಯಲ್ಲೂ ಮೂರು ಪಕ್ಷಗಳ ಶಾಸಕರುಗಳು ಗುಂಪು ಗುಂಪಾಗಿ ಕುಳಿತು ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆಯಲ್ಲಿ ತೊಡಗಿ, ಫಲಿತಾಂಶಗಳನ್ನು ತಮ್ಮದೇ ಆದ ದಾಟಿಯಲ್ಲಿ ವಿಶ್ಲೇಷಿಸುತ್ತಿದ್ದದ್ದು ಸಾಮಾನ್ಯವಾಗಿತ್ತು.
ಮುಂದಿನ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಪರಿಗಣಿತವಾಗಿದ್ದ ಈ ಪಂಚರಾಜ್ಯ ಚುನಾವಣೆಯಲ್ಲಿ ಆಡಳಿತರೂಢಾ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲು ವಿಫಲವಾಗಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ತನ್ನ ಬಲವನ್ನು ವೃದ್ಧಿಸಿಕೊಂಡಿರುವ ಬಗ್ಗೆಯೂ ಶಾಸಕರುಗಳು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದರು.