ಅಧಿಕಾರಕ್ಕೆ ಬರುವಾಗ ಜನರಿಗೆ ನೀಡಿದ ಆಶ್ವಾಸನೆಯ 165 ಭರವಸೆಗಳಲ್ಲಿ ಈಗಾಗಲೇ 125 ಭರವಸೆಗಳನ್ನು ಈಡೇರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಶಿವಮೊಗ್ಗ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂದಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿ ಮುಖ್ಯಮಂತ್ರಿಗಳು ಮಾತನಾಡಿದರು.
ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ಜನರಿಗೆ ನೀಡಲಾಗಿತ್ತು. ಅದರಂತೆ ಈವರೆಗೆ 125 ಭರವಸೆಗಳನ್ನು ಈಡೇರಿಸಲಾಗಿದ್ದು ಇನ್ನುಳಿದ ಅವಧಿಯಲ್ಲಿ ಇನ್ನು ಹಲವು ಜನಪರ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪ್ರತಿ ವರ್ಷದ ಬಜೆಟ್ ಮಂಡಿಸುವ ಮುನ್ನ ಪ್ರಣಾಳಿಕೆಯ ಭರವಸೆಗಳನ್ನು ಮುಂದಿಟ್ಟುಕೊಂಡೇ ಸಿದ್ಧತೆ ಮಾಡಲಾಗುವುದು. ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಚಾಚೂ ತಪ್ಪದೆ ಈಡೇರಿಸಿದ ಹೆಗ್ಗಳಿಕೆ ನಮ್ಮದು. ನುಡಿದಂತೆ ನಡೆದ ಸರ್ಕಾರ ನಮ್ಮದು ಎಂದು ಹೇಳಿದರು.
ಎಲ್ಲಾ ಜಾತಿ ವರ್ಗದ ಬಡವರಿಗೆ ಸಾಮಾಜಿಕ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಎಲ್ಲ ಸಮುದಾಯದ ದುರ್ಬಲರಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾವಲಂಬನೆ ಸಿಕ್ಕಾಗ ಮಾತ್ರ ಆ ಸರ್ಕಾರದ ಉದ್ದೇಶ ಈಡೇರುತ್ತದೆ. ಅದರಂತೆ ನಾವು ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಸಮಾಜದಲ್ಲಿ ಸಮಾನತೆ ಬರಬೇಕು ಎಂಬುದು ಹೊಸ ವಿಚಾರವಲ್ಲ. ಬಸವಣ್ಣ ಹಾಗೂ ಅಂಬೇಡ್ಕರ್ ಅವರು ಅಂದೇ ಹೇಳಿದ್ದರು. ಅದರಂತೆ ಸಂವಿಧಾನದ ಧ್ಯೇಯೋದ್ದೇಶಗಳನ್ನು ಜಾರಿಗೊಳಿಸುವುದು ಎಲ್ಲ ಸರ್ಕಾರಗಳ ಜವಾಬ್ದಾರಿ ಅದರಂತೆ ನಾವು ನಡೆದುಕೊಂಡಿದ್ದೇವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಮಾತನಾಡಿ, ತಾವು ಸಚಿವರಾಗಿ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ಗ್ರಾಮಾಂತರ ಪ್ರದೇಶದ 94ಸಿ 5367 ಹಾಗೂ ನಗರ ಭಾಗದ 94ಸಿಸಿ 2 ಸಾವಿರ ಅರ್ಜಿದಾರರಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ. ಫೆ.21ರವರೆಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸಲಾಗಿದೆ. ಅಲ್ಲದೆ 12 ಸಾವಿರ ಬಗರ್ ಹುಕುಂ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ. ಅರಣ್ಯ ಹಕ್ಕು ಕಾಯ್ದೆಯ 89 ಸಾವಿರ ಅರ್ಜಿ ಬಾಕಿ ಇದ್ದು ಇವರಿಗೂ ಹಕ್ಕುಪತ್ರಗಳನ್ನು ಕೊಡಲು ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.