ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಮಗನ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಒಂದು ಕಡೆ ಬ್ಯಾಂಕ್ ಖಾತೆಗಳನ್ನ ಫ್ರೀಜ್ ಮಾಡಲು ತಯಾರಿ ನಡೆಸಿದ್ರೆ, ಇನ್ನೊಂದೆಡೆ ವಿರೂಪಾಕ್ಷಪ್ಪ ವಿಚಾರಣೆಗೆ ಪ್ರಶ್ನಾವಳಿಗಳ ಪಟ್ಟಿಯನ್ನೆ ಲೋಕಾಯುಕ್ತ ಅಧಿಕಾರಿಗಳು ಸಿದ್ದಪಡಿಸಿದ್ದಾರೆ.ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಮಗ ಪ್ರಶಾಂತ್ ಮಾಡಾಳ್ ಕೋಟಿ ಕೋಟಿ ಹಣದ ತನಿಖೆಯನ್ನ ಲೋಕಾಯುಕ್ತ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಪ್ರಶಾಂತ್ ಮನೆಯಲ್ಲಿ ಸಿಕ್ಕ ಆರು ಕೋಟಿ ಹಣ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಇದೀಗ ಬ್ಯಾಂಕ್ ಖಾತೆಗಳನ್ನ ಫ್ರೀಜ್ ಮಾಡಿಸಲು ಮುಂದಾಗಿದ್ದಾರೆ. ಪ್ರಶಾಂತ್ ಮಾಡಾಳ್, ಶಾಸಕ ವಿರೂಪಾಕ್ಷಪ್ಪ ಹಾಗೂ ಬಂಧಿತ ಆರೋಪಿಗಳ ಬ್ಯಾಂಕ್ ಖಾತೆಗಳನ್ನ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ತನಿಖೆ ವೇಳೆ ಯಾವುದೇ ವಹಿವಾಟು ವ್ಯವಹಾರ ನಡೆಯದಂತೆ ಅಧಿಕಾರಿಗಳು ನಿಗಾ ಇಟ್ಟಿದ್ದು,ಈಗ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವ್ಯಕ್ತಿಗಳ ಬ್ಯಾಂಕ್ ಖಾತೆ ಫ್ರೀಜ್ ಮಾಡಲು ಬ್ಯಾಂಕ್ ಗಳಿಗೆ ಪತ್ರ ಬರೆಯಲು ಮುಂದಾಗಿದ್ದಾರೆ.
ಇನ್ನೂ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಹಾಗೂ ದಾಳಿ ನಡೆಸಿ ಎರಡು ದಿನಗಳೆ ಕಳೆದು ಹೋಗಿದೆ. ಅದ್ರೆ ಈವರೆಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಗ್ಗೆ ಯಾವುದೇ ಮಾಹಿತಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಲ್ಲ.ಲೋಕಾಯಕ್ತ ಅಧಿಕಾರಿಗಳ ಮುಂದೆ ಶಾಸಕರು ಪ್ರತ್ಯಕ್ಷವಾದರೆ.ಗ್ರಿಲ್ ಮಾಡಲು ಕೆಲವು ಪ್ರಶ್ನಾವಳಿಗಳನ್ನ ಸಿದ್ದಪಡಿಸಿಕೊಂಡಿದ್ದಾರೆ.ಲೋಕಾಯುಕ್ತ ದಾಳಿ ವೇಳೆ ಸಿಕ್ಕಿರೋ ದಾಖಲಾತಿಗಳ ಆಧಾರದ ಮೇಲೆ 50ಕ್ಕೂ ಹೆಚ್ಚು ಪ್ರಶ್ನೆಗಳನ್ನ ಸಿದ್ದಪಡಿಸಿದ್ದಾರೆ. ಆರು ಕೋಟಿ ಹಣ, ಮೂರು ವರ್ಷದಲ್ಲಿ ಕೆಎಸ್ ಡಿಎಲ್ ನಲ್ಲಿ ಕೊಟ್ಟ ಟೆಂಡರ್ ಗಳು ಹಾಗೂ ಕೆಎಸ್ ಡಿಎಲ್ ಯೂನಿಯನ್ ಶಿವಶಂಕರ್ ಮಾಡಿದ ಆರೋಪಗಳ ವಿಚಾರಣೆ ನಡೆಸಲು ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ. ಸುಮಾರು 50 ಪ್ರಶ್ನೆಗಳನ್ನ ಸಿದ್ದಪಡಿಸಿರೋ ಲೋಕಾಯುಕ್ತ ಅಧಿಕಾರಿಗಳು ಮಾಡಾಳ್ ವಿರೂಪಾಕ್ಷಪ್ಪ ಪತ್ತೆಯಾದ ಕೂಡಲೇ ವಿಚಾರಣೆ ಮಾಡಲಿದ್ದಾರೆ.
ಮಾಯವಾಗಿರೋ ಮಾಡಾಳ್ ವಿರೂಪಾಕ್ಷಪ್ಪ ಹಿಂದೆ ಬಿದ್ದಿರೋ ಲೋಕಾಯಕ್ತ ಪೊಲೀಸರು, ಶತಾಯಗತಾಯ ಅವರನ್ನ ಪತ್ತೆ ಹಚ್ಚಿ ಕೆಎಸ್ ಡಿಎಲ್ ಟೆಂಡರ್ ವ್ಯವಹಾರಗಳನ್ನ ಬಯಲಿಗೆಳೆಯಲು ಯೋಜನೆ ರೂಪಿಸಿದ್ದಾರೆ. ಸದ್ಯ ತನಿಖೆ ಚುರುಕು ಪಡೆದುಕೊಂಡಿದ್ದು, ಶಾಸಕ ವಿರೂಪಾಕ್ಷಪ್ಪಗೆ ಲೋಕಾಯುಕ್ತ ಕಂಟಕವಾಗಿ ಪರಿಣಮಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.