ವಿಶ್ವವಿಖ್ಯಾತ ಮೈಸೂರು ದಸರಾ ಮುಗಿದ ಮೇಲೆ ಕ್ಯಾಪ್ಟನ್ ಅರ್ಜುನ್ ಶಿಬಿರದಿಂದ ಪರಾರಿಯಾಗಿದ್ದ. ಆದರೆ ಅರ್ಜುನನ್ನು ಮರಳಿ ಶಿಬಿರಕ್ಕೆ ತರುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬಳ್ಳೆ ಶಿಬಿರದಿಂದ ತಪ್ಪಿಸಿಕೊಂಡಿದ್ದ ಕ್ಯಾಪ್ಟನ್ ಅರ್ಜುನ ಕೊನೆಗೂ ಸಿಕ್ಕಿದ್ದಾನೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬಳ್ಳೆ ಶಿಬಿರದಿಂದ ಬುಧವಾರ ಮಧ್ಯರಾತ್ರಿ ವೇಳೆ ಕಾಲಿಗೆ ಕಟ್ಟಿದ್ದ ಸರಪಳಿಯನ್ನು ಕಿತ್ತುಕೊಂಡು ಅಲ್ಲಿಂದ ತಪ್ಪಿಸಿಕೊಂಡಿದ್ದ ಅರ್ಜುನ, ಗುರುವಾರ ಬೆಳಿಗ್ಗೆಯಾದರೂ ಶಿಬಿರಕ್ಕೆ ವಾಪಸ್ ಬಂದಿರಲಿಲ್ಲ.
ಇದರಿಂದ ಅಲ್ಲಿನ ಸುತ್ತಮುತ್ತಲ ಕಾಡಿನ ಪ್ರದೇಶದಲ್ಲಿ ಹುಡುಕಾಡಿದ ಸಿಬ್ಬಂದಿಗಳು ಗಾಬರಿಗೊಂಡು ಮುಖ್ಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದರು.
ಬಳ್ಳೆ ಶಿಬಿರದಿಂದ 16 ಕಿ.ಮೀ. ದೂರದಲ್ಲಿರುವ ಅಂತರಸಂತೆ ಅರಣ್ಯ ಪ್ರದೇಶದಲ್ಲಿ ಸಂಜೆ 4ರ ಸಮಯದಲ್ಲಿ ಕತ್ತಿಗೆ ಗಂಟೆ ಹಾಗೂ ಕಾಲಿಗೆ ಸರಪಳಿ ಕಟ್ಟಿರುವ ಆನೆಯನ್ನು ನೋಡಿದ ಗ್ರಾಮಸ್ಥರು ಸಾಕಾನೆ ಇರಬಹುದು ಎಂದು ಭಾವಿಸಿ ಕೂಡಲೇ ವಾಚರ್ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮಾವುತನ ಮೂಲಕ ಅರ್ಜುನನನ್ನು ಪತ್ತೆ ಹಚ್ಚಿ ಮತ್ತೆ ಬಳ್ಳೆ ಕ್ಯಾಂಪ್ಗೆ ಕರೆತಂದಿದ್ದಾರೆ.