ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಪಾಲಿಹೌಸ್ ಸರ್ವನಾಶವಾಗಿದ್ದು, ರೈತರ ಕುಟುಂಬ ಬೀದಿಗೆ ಬಿದ್ದಿದೆ.
ಒಂದು ಕಡೆ ಮುರಿದು ಬಿದ್ದಿರುವ ಪೈಪುಗಳು, ಇನ್ನೊಂದೆಡೆ ಹಾರಿ ಹೋದ ಪಾಲಿ ಹೌಸ್ ಮೇಲ್ಚಾವಣಿ. ಲಕ್ಷಾಂತರ ರೂಪಾಯ್ ಸಾಲ ಮಾಡಿ ನಿರ್ಮಿಸಿದ ಪಾಲಿ ಹೌಸ್ ತನ್ನ ಕಣ್ಣು ಮುಂದೆ ನಾಶವಾಗಿದ್ದು ರೈತನ ಕಣ್ಣಲ್ಲಿ ನೀರು ತರಿಸಿದೆ.
ಈ ದೃಶ್ಯ ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಮರಾವತಿ ಎಂಬ ಗ್ರಾಮದಲ್ಲಿ. ಬೀಚಗೊಂಡಹಳ್ಳಿ ಗ್ರಾಮದ ನಿವಾಸಿ ಚಿಕ್ಕಮುನಿಯಪ್ಪನಿಗೆ ಸೇರಿದ ಪಾಲಿ ಹೌಸ್ ನಾಶವಾಗಿದೆ. ಇಳಿ ವಯಸ್ಸಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಪ್ರಗತಿ ಕೃಷ್ಣ ಬ್ಯಾಂಕ್ ನಲ್ಲಿ 38 ಲಕ್ಷ ಸಾಲ ಪಡೆದು ಬೆಳೆ ಬೆಳೆಯಲು ಸಿದ್ದ ಪಡಿಸಿದ್ದ ಪಾಲಿ ಹೌಸ್ ಈಗ ನೆಲಸಮವಾಗಿದೆ. ಬಿರುಗಾಳಿ ಸಮೇತ ಸುರಿದ ಮಳೆಯಿಂದ ಪಾಲಿ ಹೌಸ್ ಸಂಪೂರ್ಣ ನಾಶವಾಗಿದೆ.
ಇದರಿಂದ ಬ್ಯಾಂಕ್ ನಲ್ಲಿ ಪಡೆದ ಸಾಲ ತೀರಿಸಲು ದಾರಿ ಇಲ್ಲದೆ ತಲೆ ಮೇಲೆ ಕೈ ಇಟ್ಟುಕೊಂಡು ಕೂರುವಂತಾಗಿದೆ. ಜೊತೆಗೆ ಹತ್ತು ಲಕ್ಷ ಕೈಸಾಲ ಮಾಡಿಕೊಂಡಿದ್ದಾನೆ ರೈತ. ಸಂಬಂಧಿಸಿದದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತನಿಗೆ ಸೂಕ್ತ ಪರಿಹಾರ ಕೊಡಿಸುವಂತೆ ರೈತ ಅಧಿಕಾರಿಗಳ ಮೊರೆ ಹೋಗಿದ್ದಾರೆ.