ಯುವ ಬಂಜಾರ ಸಂಘದ ವತಿಯಿಂದ ತಾಂಡಾಗಳ ಅಭಿವೃದ್ಧಿಗೆ ಆಗ್ರಹಿಸಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಪಾವಗಡ ತಾಲ್ಲೂಕಿನ ಲಂಬಾಣಿ ತಾಂಡಾಗಳ ಮತ್ತು ಸಮಾಜದ ಅಭಿವೃದ್ಧಿಗೆ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ ಎಂದು ಅರೋಪಿಸಿ ಪಟ್ಟಣದ ತಹಶೀಲ್ದಾರ್ ಕಛೇರಿ ಆವರಣದಲ್ಲಿ ಯುವ ಬಂಜಾರ ಸಂಘದ ಸದಸ್ಯರು ಅನಿರ್ಧಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಂಡಿದ್ದರು.
ಪ್ರಮುಖರಾದ ಗೋವಿಂದ ನಾಯ್ಕ ಮಾತನಾಡಿ, ಪಾವಗಡ ತಾಲ್ಲೂಕಿನಲ್ಲಿ 29 ತಾಂಡಾಗಳಿವೆ. 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ನಮ್ಮ ಆರಾಧ್ಯ ದೈವ ಸೇವಾ ಲಾಲ್ ಜಯಂತಿಯನ್ನು ಅಚರಿಸಲು ಪಟ್ಟಣದಲ್ಲಿ 1 ಎಕರೆ ಜಮೀನು ನೀಡಿ ಸಮುದಾಯ ಭವನವನ್ನು ನಿರ್ಮಿಸಿಕೊಡಬೇಕು.
ಪಟ್ಟಣದ ಸರ್ಕಲ್ಗೆ ಸೇವಾಲಾಲ್ ಸರ್ಕಲ್ ಎಂದು ನಾಮಕರಣ ಮಾಡಬೇಕು. 29 ತಾಂಡಾಗಳ ಪೈಕಿ ಕೆಲವೇ ತಾಂಡಾಗಳು ಮಾತ್ರ ಕಂದಾಯ ಗ್ರಾಮಗಳಾಗಿದ್ದು, ಉಳಿದವುಗಳನ್ನು ಕಂದಾಯ ಗ್ರಾಮಗಳನ್ನಾಗಿಸಬೇಕು. ತಾಂಡಾಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಕೆ ಮಾಡುವಂತೆ ಆಗ್ರಹ ಮಾಡಿದ್ದಾರೆ.