ಬೆಂಗಳೂರು: ಪ್ರಧಾನಮಂತ್ರಿಗಳ ಅವಾಸ್ ಯೋಜನೆಯಡಿ ಎಲ್ಲರಿಗೂ ಸೂರು ಕಲ್ಪಿಸುವಲ್ಲಿ ಬೆಂಗಳೂರು ನಗರ ಜಿಲ್ಲೆ ಮೊದಲು ಸ್ಥಾನದಲ್ಲಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ಕರ್ನಾಟಕ ಗೃಹ ಮಂಡಳಿಯಿಂದ ಚಂದಪುರ ಸೂರ್ಯನಗರದಲ್ಲಿ 1ನೇ ಹಂತದ ನೂತನವಾಗಿ ನಿರ್ಮಿಸಿಲಾಗಿರುವ ಸೂರ್ಯ ಎಲಿಗೆನ್ಸ್ ಬಹುಮಹಡಿ ವಸತಿ ಸಮುಚ್ಚಯವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದಬೇಕು ಎನ್ನುವ ಮಹದಾಸೆಗೆ ಸೂರ್ಯನಗರ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈಗಾಗಲೇ ಫ್ಯಾಟ್‌ಗಳ ಹಂಚಿಕೆಗೆ ಅರ್ಜಿ ಕರೆಯಲಾಗಿದೆ. ಶೀಘ್ರವೇ ಮನೆಗಳ ಹಂಚಿಕೆಯಾಗಲಿದೆ. ಉತ್ತಮ ಗುಣಮಟ್ಟದ ಫ್ಲಾಟ್ ನಿರ್ಮಾಣದ ಸಂಕಲ್ಪಕ್ಕೆ ಮಂಡಳಿ ಬದ್ಧವಾಗಿದೆ ಎಂದು ತಿಳಿಸಿದರು.
ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಲಕ್ಷಾಂತರ ಮಂದಿ ಸ್ವಂತ ಸೂರು ಇಲ್ಲದೆ ನಿವೇಶನ ಹೊಂದುವ ಬಯಕೆಯನ್ನು ಹೊಂದಿರುತ್ತಾರೆ. ಎಲ್ಲರ ಆಶೋತ್ತರಗಳನ್ನು ಈಡೇರಿಸಲು ವಸತಿ ಇಲಾಖೆಯ ಏಷ್ಯಾದ ಅತಿದೊಡ್ಡ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಚಂದಾಪುರದಲ್ಲಿ 6 ಎಕರೆ 14 ಗುಂಟೆ ವ್ಯಾಪ್ತಿಯಲ್ಲಿ 77.14 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೂರ್ಯನಗರ ಹಲವು ವಿಶೇಷತೆಗಳನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ರಸ್ತೆ ಸೌಲಭ್ಯ, ಒಳಾಂಗಣ ಕ್ರೀಡಾಂಗಣ ಮತ್ತು ಉದ್ಯಾನವನ ನಿರ್ಮಿಸಲಾಗಿದೆ. ಒಳಚರಂಡಿ ಹಾಗೂ ಕಾವೇರಿ ನೀರು ಸರಬರಾಜು, ಮಳೆ ನೀರು
ಕೊಯ್ಲು ವ್ಯವಸ್ಥೆಯನ್ನು ಮಾಡಲಾಗಿದೆ. ಈ ಸಮುಚ್ಚಯದಲ್ಲಿ 2 ಮತ್ತು 3 ಬಿ.ಎಚ್.ಕೆ ಸೇರಿ ಒಟ್ಟು 384 ಪ್ಲ್ಯಾಟ್ ಲಭ್ಯವಿವೆ ಎಂದರು.
ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಕಾವೇರಿ ಕುಡಿಯುವ ನೀರು ಮೂರನೇ ಹಂತದಿಂದ 5ಎಮ್ ಎಲ್ ಡಿಯನ್ನು ಒದಗಿಸುವ ಯೋಜನೆ ಸರ್ಕಾರದ ಮುಂದಿದೆ. ಅಂದಾಜು 25 ಎಕರೆ ಜಮೀನನ್ನು ಗುರುತಿಸಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಲು ಮುಖ್ಯ ಮಂತ್ರಿಗಳೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಸ್ಥಳೀಯ ನಿವಾಸಿಗಳಿಗೆ ಸಮುಚ್ಚಯ ಖರೀದಿಯಲ್ಲಿ ಮೀಸಲಾತಿ ಹಾಗೂ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಅ.ದೇವೆಗೌಡ ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಜಯಣ್ಣ, ವಸತಿ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ ಮೀನಾ, ಕರ್ನಾಟಕ ಗೃಹ ಮಂಡಳಿ ಆಯುಕ್ತ ಡಿ.ಎಸ್ ರಮೇಶ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೇರಿ ಮತ್ತಿತರರಿದ್ದರು.