ಹಲವೆಡೆ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಯಚೂರು ಗ್ರಾಮೀಣ ಪೊಲೀಸರು ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟಿದ್ದಾರೆ. ಸೊಲ್ಲಾಪುರದ ಬಾಲು ದೇವಿದಾಸ್ (38), ಸಾಗರ್ ಭಾರತ್ ಪವಾರ್ (24) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 64 ಗ್ರಾಂ ಬಂಗಾರದ ಆಭರಣಗಳು, 250 ಗ್ರಾಂ ಬೆಳ್ಳಿ, 1 ಲಕ್ಷದ 70 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ರಾಯಚೂರಿನ ಯರಮರಸ್ ಕ್ಯಾಂಪ್‍ನ ಮನೆಗಳಲ್ಲಿ ಇತ್ತೀಚೆಗೆ, ಮನ್ಸಲಾಪುರದ ರಸ್ತೆಯಲ್ಲಿನ ಫ್ಯಾಕ್ಟರಿಯಲ್ಲಿ, ಹೈದ್ರಾಬಾದ್ ರಸ್ತೆಯ ಕಾರ್ ಶೋರೂಮ್ ಹಾಗೂ ಗ್ರಾನೈಟ್ ಅಂಗಡಿಯಲ್ಲಿ ನಡೆದ ಕಳ್ಳತನ ಸೇರಿ ಒಟ್ಟು 13 ಕಳ್ಳತನ ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಸರಣಿ ಕಳ್ಳತನ ನಡೆದ ಹಿನ್ನೆಲೆಯಲ್ಲಿ ಕಳ್ಳರ ಪತ್ತೆಗಾಗಿ ಎಸ್‍ಪಿ ಡಿ. ಕಿಶೋರ್ಬಾಬು, ಎಎಸ್‍ಪಿ ಎಸ್.ಬಿ.ಪಾಟೀಲ್ ನೇತೃತ್ವದ ತನಿಖಾ ತಂಡ ರಚಿಸಲಾಗಿತ್ತು. ಗ್ರಾಮೀಣ ಠಾಣೆಯ ಸಿಪಿಐ ಹನುಮಂತರಡ್ಡೆಪ್ಪ ನೇತೃತ್ವದ ರವಿರಾಜ್, ಗೋಪಾಲ್ ವಿಜಯೇಂದ್ರ ರೆಡ್ಡಿ ಅವರ ತಂಡ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.