ಬೆಂಗಳೂರು : ಮಾಣಿಕ್ ಶಾ ಪೆರೇಡ್ ಗ್ರೌಂಡಿನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭದ್ರತಾ ಉಲ್ಲಂಘನೆಯ ಆರೋಪಿ ಪರಶುರಾಮ ಕುರಿತು ಇನ್ನಷ್ಟು ಮಾಹಿತಿಗಳು ಹೊರಬಿದ್ದಿವೆ. ಈತ ಈ ಮುನ್ನವೇ ಒಂದು ಬಾರಿ ಸಿಎಂ ಸಿದ್ದರಾಮಯ್ಯ ಎದುರು ಆತ್ಮಹತ್ಯೆಗೆ ಯತ್ನಿಸಿದ್ದಷ್ಟೇ ಅಲ್ಲದೇ, ಕಂಠೀರವ ಕ್ರೀಡಾಂಗಣದಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಪಟಾಕಿ ಸಿಡಿಸಿ ಅವಾಂತರ ಸೃಷ್ಟಿಸಿದ್ದರು ಎಂದು ತಿಳಿದುಬಂದಿದೆ.
ಅಂದು ಕೆಪಿಎಸ್‌ಸಿ ಪರೀಕ್ಷೆಯ ಫಲಿತಾಂಶವನ್ನು ಸರ್ಕಾರ ತಡೆಹಿಡಿದಿತ್ತು. ಹೀಗಾಗಿ ಪರಶುರಾಮ್ ಭವಿಷ್ಯ ಡೋಲಾಯಮಾನವಾಗಿತ್ತು. ಅಂದು ಸರ್ಕಾರ ಫಲಿತಾಂಶ ಹೊರಬಿಟ್ಟಿದ್ದರೆ ನಾನೂ ಸಹ ಕೆಪಿಎಸ್‌ಸಿ ಅಧಿಕಾರಿಯಾಗಿರುತ್ತಿದ್ದೆ ಎಂಬ ವಿಚಿತ್ರ ತರ್ಕದ ಮೇಲೆ ಪರಶುರಾಮ್ ಸರ್ಕಾರದ ವಿರುದ್ದ ದ್ವೇಷ ಹೊಂದಿದ್ದರು.
ಇದೇ ವಿಷಯಕ್ಕೆ ಹಲವು ಬಾರಿ ಸರ್ಕಾರಿ ಕಚೇರಿ ಅಲೆದಾಡಿ ಬೇಸತ್ತಿದ್ದ ಪರಶುರಾಮ್, 16-02-2017 ರಂದು ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ನಡೆಯುತ್ತಿದ್ದ ಸರ್ಕಾರಿ ಕಾರ್ಯಕ್ರಮಕ್ಕೆ ನುಗ್ಗಿ ಸಿಎಂ ಸಿದ್ದರಾಮಯ್ಯ ಎದುರಿಗೇ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಮತ್ತೊಮ್ಮೆ ಕಂಠೀರವ ಕ್ರೀಡಾಂಗಣದಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಪಟಾಕಿ ಸಿಡಿಸಿ ಆತಂಕ ಸೃಷ್ಟಿಸಿದ್ದರೆಂದು ತಿಳಿದುಬಂದಿದೆ. ಶುಕ್ರವಾರವೂ ಸಹ ಪಾಕ್ಷಿಕ ಪತ್ರಿಕೆಯೊಂದರ ಹೆಸರಿನಲ್ಲಿ ಪಾಸ್ ಪಡೆದುಕೊಂಡಿದ್ದ ಪರಶುರಾಮ್ ಮೈಸೂರಿನಿಂದ ರೈಲಿನಲ್ಲಿ ಬಂದು ಸಿಎಂ ಗಮನ ಸೆಳೆಯಲು ಈ ರೀತಿಯ ಕೃತ್ಯ ಎಸೆಗಿದ್ದರಾರೆಂದು ತಿಳಿದುಬಂದಿದೆ.