ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಮೂರು ವರ್ಷದ ಕಾನೂನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳ 2ನೇ ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ. ಆದರೆ ಐದು ವರ್ಷದ ಕಾನೂನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಮಾತ್ರ ನಡೆಸುತ್ತಿದ್ದು, “ನಮಗೆ ತಾರತಮ್ಯವಾಗಿದೆ” ಎಂದು ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬಹಿಷ್ಕರಿಸಿದ್ದಾರೆ. ಮೂರನೇ ದಿನವೂ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಿಲ್ಲ.
ಮೂರು ವರ್ಷ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಪರೀಕ್ಷೆಗಳು ರದ್ದಾಗಿರುವ ಬಗ್ಗೆ ಕೆಲವು ಪತ್ರಿಕೆಗಳು ಗೊಂದಲಕಾರಿಯಾಗಿ ವರದಿ ಮಾಡಿದವು. ಈ ಹಿನ್ನೆಲೆಯಲ್ಲಿ ಐದು ವರ್ಷ ಕಾನೂನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುವುದೇ ಅಥವಾ ಬೇಡವೇ ಎಂಬ ಗೊಂದಲಲ್ಲಿ ಬಿದ್ದಿದ್ದರು ಎನ್ನುತ್ತಾರೆ ವಿದ್ಯಾರ್ಥಿಗಳು.
ಮೂರು ವರ್ಷದ ಕಾನೂನು ಪದವಿಯ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಿ, ಐದು ವರ್ಷದ ಕಾನೂನು ಪದವಿಯ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುತ್ತಿರುವುದು ಸರಿಯೇ ಎಂಬ ಪ್ರಶ್ನೆಯನ್ನು ಕಾನೂನು ವಿದ್ಯಾರ್ಥಿಗಳು ಕೇಳುತ್ತಿದ್ದು, ಇದರ ಭಾಗವಾಗಿ ಪರೀಕ್ಷೆಗಳನ್ನು ಬಹಿಷ್ಕರಿಸಿದ್ದಾರೆ.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಿದ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿದ್ದರೆ ಮತ್ತಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ತುಮಕೂರಿನ ಸೂಫಿಯಾ ಲಾ ಕಾಲೇಜು ವಿದ್ಯಾರ್ಥಿ ಡಿ.ಆರ್.ಅನಂತಕುಮಾರ್, “ತರಗತಿ ನಡೆಯದೆಯೇ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ಹಿಂದೆ ಪರೀಕ್ಷೆ ನಿಗದಿಯಾಗಿ ಮುಂದೂಡಲಾಗಿತ್ತು. ಆದರೆ ಈ ಹಿಂದೆ ರೂಪಿಸಿರುವ ಪ್ರಶ್ನೆ ಪತ್ರಿಕೆಯನ್ನೇ ಈಗಿನ ಪರೀಕ್ಷೆಗೂ ನೀಡಲಾಗಿದೆ. ಪ್ರಶ್ನೆ ಪತ್ರಿಕೆಯಲ್ಲಿ ಅಕ್ಟೋಬರ್, ನವೆಂಬರ್ ಎಂದಿರುವುದನ್ನು ನಾವು ಗಮನಿಸಬಹುದು” ಎಂದು ತಿಳಿಸಿದರು.
ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಡೋಲಾಯಮಾನವಾಗಿದೆ. ಆಗಿರುವ ಲೋಪವನ್ನು ಸರಿದೂಗಿಸಲು ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುತ್ತಾರೋ, ಅಥವಾ ಪರೀಕ್ಷೆ ರದ್ದು ಮಾಡಬೇಕೆಂಬ ಆದೇಶವನ್ನು ಐದನೇ ವರ್ಷದ ಕಾನೂನು ವಿದ್ಯಾರ್ಥಿಗಳಿಗೂ ಅನ್ವಯಿಸುತ್ತಾರೋ ಎಂಬ ಗೊಂದಲು ಹಾಗೇ ಉಳಿದಿದೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಕಾನೂನು ವಿವಿಯ ಕುಲಪತಿಯವರಿಗೆ, ಕುಲಸಚಿವರಿಗೆ ಸಾಕಷ್ಟು ಸಲ ಕರೆ ಮಾಡಿದೆವು. ಆದರೆ ನಮ್ಮ ಕರೆಯನ್ನು ಯಾರೂ ಸ್ವೀಕರಿಸಲಿಲ್ಲ. (ಪ್ರತಿಕ್ರಿಯೆ ಸಿಕ್ಕರೆ ಅಪ್ಡೇಟ್ ಮಾಡಲಾಗುವುದು)
ಏನಿದು ವಿವಾದ..?
ಕೋವಿಡ್ ಕಾರಣಕ್ಕೆ ಕೊನೆಯ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಉಳಿದ ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಆಂತರಿಕ ಮೌಲ್ಯಮಾಪನದ ಆಧಾರದಲ್ಲಿ ಮುಂದಿನ ತರಗತಿಗಳಿಗೆ ಬಡ್ತಿ ನೀಡುವಂತೆ ಯುಜಿಸಿ, ಸರ್ಕಾರ ಸೂಚಿಸಿದ್ದರೂ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿತ್ತು.
ಪರೀಕ್ಷೆ ನಡೆಸಲು ತೀರ್ಮಾನಿಸಿದ್ದ ವಿಶ್ವವಿದ್ಯಾಲಯದ ನಿರ್ಣಯವನ್ನು ಪ್ರಶ್ನಿಸಿ ಮೂರು ವರ್ಷಗಳ ಅವಧಿಯ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು. ಕೋವಿಡ್ ಕಾರಣದಿಂದ ಕಾಲೇಜುಗಳಲ್ಲಿ ತರಗತಿಗಳು ನಡೆದಿಲ್ಲ. ಹಲವಾರು ಕಾರಣಗಳಿಂದ ಆನ್‌ಲೈನ್ ತರಗತಿಗಳು ವಿದ್ಯಾರ್ಥಿಗಳನ್ನು ತಲುಪಲು, ಪರೀಕ್ಷೆಗೆ ಸಿದ್ಧಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಭೌತಿಕ ಪರೀಕ್ಷೆ ನಡೆಸದೆ ಆಂತರಿಕ ಮೌಲ್ಯಮಾಪನ ಆಧಾರದಲ್ಲಿ ಮುಂದಿನ ತರಗತಿಗಳಿಗೆ ಬಡ್ತಿ ನೀಡುವಂತೆ ಯುಜಿಸಿ, ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದ್ದವು.
ಐದು ವರ್ಷದ ಕಾನೂನು ಪದವಿ ವಿದ್ಯಾರ್ಥಿಗಳೂ ಇದೇ ಸಮಸ್ಯೆಯನ್ನು ಹೇಳುತ್ತಿದ್ದು, ಮೂರು ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ ಎಂಬುದು ವಿವಾದದ ಮೂಲ.