ಲಾಕ್ ಡೌನ್ ನಲ್ಲಿ ರಾಜ್ಯದಲ್ಲಿ ಲಾಕ್ ಆಗಿದ್ದ ಗುಜರಾತಿನ 58 ವಿದ್ಯಾರ್ಥಿಗಳು ತವರಿಗೆ ತೆರಳಲು ರಾಜಹಂಸ ಬಸ್ಸುಗಳ ನಿಯೋಜನೆ ಮಾಡಲಾಗಿದೆ.
ಕೊರೊನಾ ವೈರಾಣು ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾದ ಕಾರಣದಿಂದಾಗಿ ತಮ್ಮ ಸ್ವಂತ ಊರುಗಳಿಗೆ ತೆರಳಲು ಸಾಧ್ಯವಾಗದೆ ಧಾರವಾಡದಲ್ಲಿ ಸಿಕ್ಕಿಹಾಕಿಕೊಂಡು ಕಳೆದ ಒಂದು ತಿಂಗಳನಿಂದ ತೊಂದರೆ ಅನುಭವಿಸುತ್ತಿದ್ದ ರಾಜ್ಯದ ವಿವಿಧ ಆಯುರ್ವೇದಿಕ್ ಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಗುಜರಾತಿನ 58 ವಿದ್ಯಾರ್ಥಿಗಳನ್ನು ಅವರ ತವರು ರಾಜ್ಯಕ್ಕೆ ತೆರಳಲು ವಾಕರಸಾ ಸಂಸ್ಥೆಯಿಂದ ಸಾರಿಗೆ ವ್ಯವಸ್ಥೆ ಮಾಡಲಾಯಿತು.
ವಾಕರಸಾಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ಸೂಚನೆ ಅನ್ವಯ ರಾಜೀವಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ರವರ ಕೋರಿಕೆಯ ಮೇರೆಗೆ ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ರವರ ನಿರ್ದೇಶನದಂತೆ ವಿದ್ಯಾರ್ಥಿಗಳನ್ನು ಹುಬ್ಬಳ್ಳಿ ವಿಭಾಗದಿಂದ ಮೂರು ರಾಜಹಂಸ ಬಸ್ಸುಗಳಲ್ಲಿ ಕಳಹಿಸಿಕೊಡಲಾಯಿತು.
ಈ ಬಸ್ಸುಗಳು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತ್ ಮೂರು ರಾಜ್ಯಗಳಲ್ಲಿ ಸುಮಾರು 3000 ಕಿಲೋ ಮೀಟರುಗಳಷ್ಟು ಕ್ರಮಿಸಬೇಕಾಗಿದ್ದು, ಲಾಕ್ ಡೌನ್ ಅವಧಿಯಿರುವುದರಿಂದ ಮಾರ್ಗಮಧ್ಯದಲ್ಲಿ ಯಾವುದೇ ತೊಂದರೆ ಉದ್ಭವಿಸದಂತೆ ಮುಂಜಾಗೃತ ಕ್ರಮವಾಗಿ ಮೂರು ಹೊಚ್ಚ ಹೊಸ ರಾಜಹಂಸ ಬಸ್ಸುಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಿ ತಾಂತ್ರಿಕವಾಗಿ ಸುಸಜ್ಜಿತವಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳಲಾಗಿದೆ. ಎಲ್ಲಾ ಬಸ್ಸುಗಳಿಗೆ ಹೆಚ್ಚುವರಿ ಟೈರ್, ಹೆಡ್ ಲೈಟ್ ಅಸೆಂಬ್ಲಿ ಮತ್ತಿತರ ಟೂಲ್ಸ್ ಗಳನ್ನು ಒದಗಿಸಲಾಗಿದೆ.
ಪ್ರತಿ ಬಸ್ಸಿನ ಹೊರಭಾಗ ಮತ್ತು ಒಳಭಾಗವನ್ನು ಸಂಪೂರ್ಣವಾಗಿ ಡೆಟಾಲ್ ಮತ್ತು ಫಿನಾಯಿಲ್ ಮಿಶ್ರಿತ ಕ್ರಿಮಿನಾಷಕದಿಂದ ತೊಳೆದು ಬಾಗಿಲು, ಕಿಟಕಿ, ಸೀಟ್ ಗಳನ್ನು ಮತ್ತು ಹ್ಯಾಂಡ್ ರೇಲ್ ಗಳನ್ನು ಸ್ಯಾನಿಟೈಜರ್ ನಿಂದ ಶುಚಿಗೊಳಿಸಿ ಪರಿಪೂರ್ಣ ಶುಭ್ರತೆ ಖಚಿತಪಡಿಸಿಕೊಳ್ಳಲಾಗಿದೆ.