ಫೆಬ್ರವರಿ 6 ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಕಂಬಳಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾನೂನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆಯೆಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ತಿಳಿಸಿದ್ದಾರೆ.
ಕಂಬಳ ಆಚರಣೆ ಕಾನೂನು ಬದ್ಧಗೊಳಿಸುವ ಸಂಬಂಧ ಇಂದು ನಡೆದ ಸಭೆಯ ನಂತರ ಮಾತನಾಡಿದ ಸಚಿವರು ಕಂಬಳ ಅಧಿಕೃತಗೊಳಿಸುವ ಕಾನೂನನ್ನು ಜಾರಿಗೆ ತರುವ ಸಂಬಂಧ ಪಶುಸಂಗೋಪನಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಈ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಧಿವೇಶನದಲ್ಲಿ ಕಾನೂನು ಜಾರಿಗೆ ತರಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕಂಬಳ ಗ್ರಾಮೀಣ ಕ್ರೀಡೆಯಾಗಿದ್ದು ಇದರಲ್ಲಿ ಪ್ರಾಣಿ ಹಿಂಸೆ ಇರುವುದಿಲ್ಲ, ಸಾಮಾಜಿಕ ಮತ್ತು ಧಾರ್ಮಿಕ ಭಾವನೆಗಳು ಈ ಕ್ರೀಡೆ ಜೊತೆ ತಳುಕುಹಾಕಿಕೊಂಡಿದೆ. ಜೊತೆಗೆ ಪ್ರಾಣಿಗಳಿಗೆ ತೊಂದರೆಯಾಗದಂತೆ ಕಂಬಳ ನಡೆಸಲು ಸರ್ಕಾರ ಈ ಹಿಂದೆಯೇ ಅನುಮತಿ ನೀಡಿತ್ತು ಎಂದು ಸಚಿವರು ಹೇಳಿದರು.
ಕಂಬಳಕ್ಕೆ ಮಾನ್ಯತೆ ನೀಡುವ ಕಾನೂನು ತರಲು ಸರ್ಕಾರ ನಿರ್ಧರಿಸಿದ್ದು, ಪ್ರಾಣಿಗಳ ಹಿಂಸೆ ತಡೆ ಕಾನೂನು ಅಡಿ ತಿದ್ದುಪಡಿ ತರುವ ಮೂಲಕ ಕಂಬಳದ ಜೊತೆ ಎತ್ತಿನ ಗಾಡಿ ಸ್ಪರ್ಧೆಗೂ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಈಗ ಅಧಿವೇಶನ ಇರುವ ಹಿನ್ನೆಲೆಯಲ್ಲಿ ಈ ಕುರಿತು ಸುಗ್ರೀವಾಜ್ಞೆ ತರಲು ಸಾಧ್ಯವಿಲ್ಲ. ಬದಲಾಗಿ ಒಂದು ಪ್ರತ್ಯೇಕ ಕಾನೂನನ್ನು ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ ಎಂದ ಸಚಿವರು ಸಾಂಪ್ರದಾಯಿಕ ಕ್ರೀಡೆಗಳಿಗೆ ನಿಷೇಧ ತರುವುದು ಸಮಂಜಸವಲ್ಲ ಎಂದು ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.