ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಯೋಜನೆಯೊಂದನ್ನು ರೂಪಿಸಿದ್ದು, ಶೀಘ್ರದಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆದು ವಿಶ್ವ ಬ್ಯಾಂಕ್ ಸಹಾಯ ಕೋರಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ರಾಜ್ಯದ 412 ಪದವಿ ಕಾಲೇಜುಗಳಲ್ಲಿ 101 ಕಾಲೇಜುಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸ್ವಂತ ಕಟ್ಟಡವಿಲ್ಲ, ಕೆಲವು ಕಾಲೇಜುಗಳಲ್ಲಿ ಮೂಲ ಸೌಕರ್ಯದ ಕೊರತೆಯಿದ್ದು ಶಿಕ್ಷಣ ಮಟ್ಟವನ್ನು ಸಹ ಸುಧಾರಿಸುವ ಅಗತ್ಯವಿದೆ. ಅದಕ್ಕಾಗಿ 3,000 ದಿಂದ 3,500 ಕೋಟಿ ರೂ ಗಳ ಅಗತ್ಯವಿದ್ದು ಇದಕ್ಕಾಗಿ ರಾಜ್ಯ ಸರ್ಕಾರ ಗಂಭೀರ ಚಿಂತನೆಯಲ್ಲಿದೆ ಎಂದರು.
ಖಾಲಿ ಹುದ್ದೆ ಭರ್ತಿಗೆ ಕ್ರಮ: ಪ್ರಸುತ್ತ ರಾಜ್ಯದಲ್ಲಿ 9,000 ಉಪನ್ಯಾಸಕರ ಹುದ್ದೆಗಳಿದ್ದು ಅದರಲ್ಲಿ 3,000 ಹುದ್ದೆಗಳು ಖಾಲಿ ಇದ್ದವು. ಇತ್ತೀಚೆಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 2,150 ಹುದ್ದೆಗಳನ್ನು ಭರ್ತಿಮಾಡಲಾಗಿದ್ದು, ಉಳಿದ ಹುದ್ದೆಗಳಿಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿರುವ 412 ಪದವಿ ಕಾಲೇಜುಗಳಲ್ಲಿ 42 ಕಾಲೇಜುಗಳಲ್ಲಿ ಮಾತ್ರ ಖಾಯಂ ಪ್ರಾಂಶುಪಾಲರುಗಳಿದ್ದು, ಉಳಿದ ಕಾಲೇಜುಗಳಲ್ಲಿನ ಪ್ರಾಂಶುಪಾಲ ಹುದ್ದೆಗಳು ಖಾಲಿ ಇವೆ. ನಿಯಮಾವಗಳಿಗಳ ಪ್ರಕಾರ ಕ್ರಮಕೈಗೊಂಡು ಮುಂದಿನ ಶೈಕ್ಷಣಿಕ ವರ್ಷದೊಳಗೆ ಖಾಲಿ ಹುದ್ದೆಗಳನ್ನು ಭರ್ತಿಮಾಡಲು ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.