ಬೆಂಗಳೂರು : ವೈದ್ಯಕೀಯ ಕ್ಷೇತ್ರ ಸೇವಾ ಮನೋಭಾವದ್ದು ಎಂಬ ಮೂಲ ಉದ್ದೇಶವನ್ನ ನಾವು ಮರೆಯಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ವಿಧಾನ ಸೌಧದಲ್ಲಿಂದು ರಾಷ್ಟ್ರೀಯ ವೈದ್ಯರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾನವೀಯತೆ ಅತಃಕರಣದಿಂದ ವೈದ್ಯರು ಬಡವರಿಗೆ ಚಿಕಿತ್ಸೆ ನೀಡಲು ಮುಂದಾಗಬೇಕು. ಸೇವಾ ಮನೋಭಾವ ಇದ್ದಾಗ ಮಾತ್ರ ಒಬ್ಬ ಡಾಕ್ಟರ್ ಒಳ್ಳೆಯ ಡಾಕ್ಟರ್ ಎನಿಸಿಕೊಂಡು ಜನರಿಗೆ ಹತ್ತಿರವಾಗಲು ಸಾಧ್ಯ. ಡಾ. ಬಿಧಾನ್ ಚಂದ್ರ ರಾಯ್ ಅವರನ್ನೇ ಎಲ್ಲ ವೈದ್ಯರು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಡಾ. ಬಿ.ಸಿ ರಾಯ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ನಾಯಕರಲ್ಲಿ ಒಬ್ಬರಾಗಿ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದವರು. ಬಿ.ಸಿ ರಾಯ್ ಅವರು ರಾಜಕಾರಣದಲ್ಲಿ ಉನ್ನತ ಸ್ಥಾನ ಅಲಂಕರಿಸಿದರೂ, ತಮ್ಮ ವೈದ್ಯ ವೃತ್ತಿಯನ್ನು ಮರೆತಿರಲಿಲ್ಲ. ಸಿಎಂ ಆಗಿದ್ದಾಗಲೂ ಸಂಜೆಯ ವೇಳೆ 1 ಗಂಟೆ ಕೊಳಗೆರಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದರು. ಅವರ ಸ್ಮರಣಾರ್ಥವಾಗಿಯೇ ನಮ್ಮ ದೇಶದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚಾರಣೆ ಆಚರಣೆಗೆ ಬಂದಿದೆ ಎಂದರು.