ತಮ್ಮ ಮಗಳ ವಿರುದ್ಧದ ಆಧಾರ ರಹಿತ ಮತ್ತು ಸುಳ್ಳು ಆರೋಪಗಳಿಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರಾದ ಜೈರಾಂ ರಮೇಶ್ ಮತ್ತು ಪವನ್ ಖೇರಾ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಸ್ಮೃತಿ ಇರಾನಿ ಅವರ ಮಗಳು ಝೋಯಿಶ್ ಇರಾನಿ ಅವರು ಮೃತರೊಬ್ಬರ ಹೆಸರಿನಲ್ಲಿ ಗೋವಾದಲ್ಲಿ ಬಾರ್ ನಡೆಸುತ್ತಿದ್ದಾರೆ. ಹೀಗಾಗಿ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್ ನಾಯಕರು ಆಗ್ರಹಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಂಡಿದ್ದಾರೆ. ಆರೋಪಗಳನ್ನು ಬೇಷರತ್ ವಾಪಸ್ ಪಡೆದು, ಕ್ಷಮೆಯಾಚಿಸದಿದ್ದಲ್ಲಿ ಅವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ನೋಟಿಸಲ್ಲಿ ತಿಳಿಸಲಾಗಿದೆ. ಕಾಂಗ್ರೆಸ್ ನಾಯಕಿ ನೆಟ್ಟ ಡಿಸೋಜಾ ಮತ್ತು ಕಾಂಗ್ರೆಸ್ ಪಕ್ಷಕ್ಕೂ ನೋಟಿಸ್ ಕಳುಹಿಸಲಾಗಿದೆ. ಝೋಯಿಶ್ ಇರಾನಿಗೆ ಒಡೆತನದಲ್ಲಿದೆ ಎನ್ನಲಾದ ರೆಸ್ಟೋರೆಂಟ್ ಹೊರಗೆ ನಿನ್ನೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.