ಕಾಂಗ್ರೆಸ್ ನ ಕೆಲವು ನಾಯಕರು ಬಿಜೆಪಿಯ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿರುವ ಬೆನ್ನಲ್ಲೇ, ನನಗೂ ಎಸ್ ಎಂ ಕೆ ಕರೆ ಮಾಡಿದ್ದರು ಅಂತ ಗೃಹ ಸಚಿವರು ಹೊಸ ಬಾಂಬ್ ಸಿಡಿಸಿದ್ದಾರೆ.
ವಿಧಾನಸೌಧದಲ್ಲಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದು, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ವ್ಯತ್ಯಾಸವಿದೆ. ಪುಲ್ವಾಮ ಸೇರಿ ಇತರ ಅವಕಾಶಗಳು ಬಿಜೆಪಿ ಯಶಸ್ವಿಗೆ ಕಾರಣವಾಗಿವೆ. ಸೋಲಿಗೆ ಯಾವುದೇ ಕಾರಣಗಳಿರಬಹುದು. ಆದರೆ ಜನರ ತೀರ್ಪನ್ನ ನಾವು ಒಪ್ಪಿಕೊಳ್ಳಬೇಕು ಎಂದರು. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜಸ್ತಾನ ಸೇರಿ ಇತರ ಕಡೆಗಳಲ್ಲೂ ಸೋಲಾಗಿದೆ. ಆದರೆ ಇದರಿಂದ ಮೈತ್ರಿ ಸರ್ಕಾರಕ್ಕೇನು ಅಪಾಯವಿಲ್ಲ ಎಂದರು.
ಇನ್ನು ಎಸ್.ಎಂ.ಕೃಷ್ಣರನ್ನು ಕಾಂಗ್ರೆಸ್ ನಾಯಕರು ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಸ್.ಎಂ.ಕೃಷ್ಣರು ನಮ್ಮ ನಾಯಕರಾಗಿದ್ದವರು. ರಾಜಕೀಯ ಹೊರತು ಪಡಿಸಿ ಭೇಟಿ ಮಾಡಿದ್ದಾರೆ. ನನಗೂ ಎಸ್ ಎಂಕೆ ಕರೆ ಮಾಡಿ ಮಾತನಾಡಿದ್ದರು. ಹಾಗಂತ ಬೇರೆ ಅರ್ಥ ಕಲ್ಪಿಸೋಕೆ ಸಾಧ್ಯವೇ? ಎಂದರು.
ಬಿಜೆಪಿ ನಾಯಕರು ನನ್ನನ್ನ ಭೇಟಿ ಮಾಡಿದ್ದರು. ಹಾಗಂತ ಅವರು ಕಾಂಗ್ರೆಸ್ ಗೆ ಬರುತ್ತಾರೆ ಅಂತ ಅರ್ಥವೇ? ಎಲ್ಲವೂ ಊಹಾಪೋಹ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.