ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸಿಲುಕಿದ ಬೆನ್ನಲ್ಲೇ ಅವರ ಪತ್ನಿ ಪಾರ್ವತಿ ಈಗ ತಮಗೆ ನೀಡಲಾಗಿದ್ದ 14 ಸೈಟ್ ಗಳನ್ನೂ ಹಿಂದಿರುಗಿಸಿದ್ದಾರೆ. ಈ ಬಗ್ಗೆ ಅವರು ಬರೆದ ಭಾವುಕ ಪತ್ರವನ್ನು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ ಮುಡಾ ಸೈಟು ಅಕ್ರಮವಾಗಿ ಹಂಚಿಕೆಯಾಗಿದೆ ಎಂದು ಆರೋಪವಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ಆರಂಭವಾಗಲಿದೆ. ಇದರ ನಡುವೆ ವಿಪಕ್ಷಗಳು ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಡ ಹೇರುತ್ತಿದ್ದಾರೆ.
ಇದೆಲ್ಲಾ ರದ್ದಾಂತಗಳ ಬಳಿಕ ಪಾರ್ವತಿ ತಮ್ಮ ಹೆಸರಿನಲ್ಲಿದ್ದ ಎಲ್ಲಾ 14 ಸೈಟುಗಳನ್ನು ಹಿಂಪಡೆದುಕೊಳ್ಳುವಂತೆ ಮುಡಾಗೆ ಪತ್ರ ಬರೆದಿದ್ದಾರೆ. ನಾನು ಯಾವತ್ತೂ ಸೈಟು, ಚಿನ್ನಕ್ಕಾಗಿ ಆಸೆಪಟ್ಟವಳಲ್ಲ. ನನ್ನ ಪತಿಗಿಂತ ಸೈಟು ದೊಡ್ಡದಲ್ಲ ಎಂದು ಪಾರ್ವತಿ ಪತ್ರದಲ್ಲಿ ಬರೆದಿದ್ದಾರೆ.
ನನ್ನ ಪತಿ ರಾಜ್ಯದ ರಾಜಕಾರಣಿಯಾಗಿ 40 ವರ್ಷಗಳಿಂದ ಒಂದೇ ಒಂದು ಕಳಂಕವಿಲ್ಲದೇ ಬದುಕುತ್ತಿದ್ದಾರೆ. ಅವರಿಗೆ ಮುಜುಗರವಾಗಬಾರದು ಎಂದು ಸಾರ್ವಜನಿಕ ಜೀವನದಿಂದ ದೂರವಿದ್ದವಳು ನಾನು. ಅವರ ರಾಜಕೀಯ ಜೀವನಕ್ಕೆ ನನ್ನಿಂದ ಸಣ್ಣ ಕಳಂಕವೂ ಬರಬಾರದು ಎಂದು ಬದುಕಿದವಳು.
ಮುಡಾ ಸೈಟು ವಿಚಾರ ನನಗೆ ನೋವುಂಟು ಮಾಡಿದೆ. ನನ್ನ ಸಹೋದರ ಅರಿಶಿನ ಕುಂಕುಮದ ಬಾಬ್ತು ನೀಡಿದ ಸೈಟುಗಳವು. ಇದರಿಂದ ಅನ್ಯಾಯವಾಗಿ ನನ್ನ ಪತಿ ಆರೋಪಗಳನ್ನು ಎದುರಿಸಬೇಕಾಗುತ್ತಿದೆ. ಈ ಹಿನ್ನಲೆಯಲ್ಲಿ ನನಗೆ ನೀಡಿದ 14 ಸೈಟುಗಳನ್ನು ವಾಪಸ್ ಮಾಡಲು ನಿರ್ಧರಿಸಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.