ಬೆಂಗಳೂರು : ಬಿಜೆಪಿ ಸರ್ಕಾರದ ಸಚಿವ ಸಂಪುಟ ಇನ್ನು ರಚನೆಯಾಗದ ಹಿನ್ನಲೆಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಇದ್ದ ಆತುರ ಸಚಿವ ಸಂಪುಟ ಮಾಡಲು ಏಕೆ ಅವಸರ ತೋರುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಅತಿವೃಷ್ಟಿ, ಅನಾವೃಷ್ಟಿಗಳಿಗೆ ಸ್ಪಂದಿಸಬೇಕಾದ ಕಂದಾಯ , ಕೃಷಿ, ಗ್ರಾಮೀಣ ಅಭಿವೃದ್ಧಿ ಇಲಾಖೆಗಳಿಗೆ ಸಚಿವರೇ ಇಲ್ಲ. ಆದ್ಯತೆ ಅಧಿಕಾರಿಗಳ ವರ್ಗಾವಣೆಯದ್ದೇ? ಸಚಿವ ಸಂಪುಟ ವಿಸ್ತರಣೆಯದ್ದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಹಾಗೇ ಟ್ವೀಟರ್ ನಲ್ಲಿ ರಾಜ್ಯಪಾಲರ ಕ್ರಮದ ಬಗ್ಗೆ ಪ್ರಶ್ನಿಸಿದ ಸಿದ್ದರಾಮಯ್ಯ, ವಿಶ್ವಾಸ ಮತಯಾಚನೆ ಮಾಡಲು ಸಂದೇಶದ ಮೇಲೆ ಸಂದೇಶ ಸದನಕ್ಕೆ ಕಳುಹಿಸುತ್ತಿದ್ದರಲ್ಲವೇ? ಆದರೆ ಈಗ ಘನತೆವೆತ್ತ ರಾಜ್ಯಪಾಲರ ಗಮನಕ್ಕೆ ತರುತ್ತೇನೆ. ಸಚಿವರಿಲ್ಲದ ಏಕವ್ಯಕ್ತಿ ಸಂಪುಟದಿಂದ ಏನಾಗುತ್ತಿದೆ? ರಾಜ್ಯದ ಜನತೆ ಅನುಭವಿಸುತ್ತಿರುವ ಬವಣೆ ಕಾಣುತ್ತಿಲ್ಲವೇ? ಎಂದು ಕೇಳಿದ್ದಾರೆ.