ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೂ ಮುನ್ನವೇ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನಡುವೆ ಮಾತಿನ ಚಕಮಕಿ ನಡೆದಿದೆ. ಗೋವಿಂದರಾಜು ಡೈರಿ ಚರ್ಚೆಗೆ ಒತ್ತಾಯಿಸಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು. ಬಿಜೆಪಿಯವರು ಬರ ಚರ್ಚೆಗೆ ಆಸ್ಪದ ಕೊಡದೇ, ಡೈರಿ ಚರ್ಚೆರೆಗೆ ಆಗ್ರಹಿಸಿ ಧರಣಿ ನಡೆಸಿದ್ದರು. ಜನರು ಕಿಡಿಕಾರಿದ ಬಳಿಕ ಧರಣಿ ಕೈಬಿಟ್ಟಿದ್ದಾರೆ. ಅಧಿಕಾರದಲ್ಲಿದ್ದಾಗ ಬಿಜೆಪಿ ನಾಯಕರು ರಾಜ್ಯವನ್ನ ಲೂಟಿ ಹೊಡೆದಿದ್ದಾರೆ. ಬಿಜೆಪಿ ನಾಯಕರಿಗೆ ಮಾನ- ಮರ್ಯಾದೆ ನಾಚಿಕೆ ಇಲ್ಲ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಆರೋಪಕ್ಕೆ ತಿರುಗೇಟು ನೀಡಿದ ಜಗದೀಶ್ ಶೆಟ್ಟರ್, ಡೈರಿ ಚರ್ಚೆಗೆ ಆಸ್ಪದ ಕೊಡದ ಸರ್ಕಾರಕ್ಕೆ ನಾಚಿಕೆ ಆಗಬೇಕು. ವಿಪಕ್ಷ ನಾಯಕರಾಗಿದ್ದಾಗ ಸಾಲ ಮಾಡುವುದನ್ನ ವಿರೋಧಿಸಿದ್ದ ಸಿದ್ದರಾಮಯ್ಯ, ಸಿಎಂ ಆದ ಬಳಿಕ ರಾಜ್ಯದ ಜನರ ಮೇಲೆ ಸಾಲದ ಹೊರೆ ಹೊರಿಸುತ್ತಿದ್ದಾರೆ ಎಂದು ಶೆಟ್ಟರ್ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಎಲ್ಲ ಸರ್ಕಾರಕ್ಕೂ ಸಾಲ ಮಾಡುವುದಕ್ಕೆ ಒಂದು ಮಿತಿ ಇರುತ್ತೆ. ಆ ಮಿತಿಯೊಳಗೆ ಸಾಲ ಮಾಡಿದ್ದೇವೆ. ಎಲ್ಲ ಸರ್ಕಾರಗಳು ಮಿತಿಯೊಳಗೆ ಸಾಲ ಮಾಡಿವೆ ಎಂದು ಹೇಳಿದ್ದಾರೆ.