ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಹಿಂದ ಮಂತ್ರ ಕೇವಲ ರಾಜಕಾರಕ್ಕಷ್ಟೇ ಸಿಮಿತವಾಯ್ತಾ ? ಎಲ್ಲಾ ಅಹಿಂದ ವರ್ಗಗಳನ್ನ ಒಗ್ಗೂಡಿಸಲು ಹೊರಟ ಸಿದ್ದರಾಮಯ್ಯ ನವರ ಕನಸು ಹುಸಿಯಾದಂತೆ ಕಾಣುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತಿದೆ ಈ ಘಟನೆ.
ದೇವಸ್ಥಾನದಲ್ಲಿ ನಡೆಯುತ್ತಿದ್ದ ಅನ್ಯಾಯ ಅಕ್ರಮಗಳ ವಿಚಾರವಾಗಿ ಧ್ವನಿಯೆತ್ತಿದ ದಲಿತರ ಮೇಲೆ ಕುರುಬ ಸಮುದಾಯದಿಂದ ಇನ್ನಿಲ್ಲದ ಶೋಷಣೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಗಂಗನಘಟ್ಟ ಮೇಲನಹಳ್ಳಿಯಲ್ಲಿ ಈ ಘಟನೆ ನಡೆದಿದೆ. 90 ಮನೆಯ ಕುರುಬ ಸಮುದಾಯದವರು, 25 ಮನೆಯವರು ವಾಸವಿರುವ ಪತಿಶಿಷ್ಟ ಜಾತಿಯರ ಮೇಲೆ ದೌರ್ಜನ್ಯ, ಶೋಷಣೆ ಮಾಡುತ್ತಿದ್ದಾರೆ ಎಂದು ಅವಲತ್ತಕೊಂಡಿದ್ದಾರೆ. ಕಳೆದ ರಾತ್ರಿ ದೇವಸ್ಥಾನಕ್ಕೆ ಪ್ರವೇಶಕ್ಕೆ ಯತ್ನಿಸಿದ ದಲಿತರಿಗೂ ಕುರುಬ ಸಮುದಾಯದ ನಡುವೆ ಜಗಳ ನಡೆದಿದೆ.
ಗ್ರಾಮದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದ್ದು, ಪೊಲೀಸರು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕುಡಿಯುವ ನೀರು, ದೇವಸ್ಥಾನ ಪ್ರವೇಶ ನಿಷೇಧ ಸೇರಿದಂತೆ ವಿನಾಕಾರಣ ದಲಿತರ ಮೇಲೆ ನಿರಂತರ ಶೋಷಣೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ದಲಿತರು ದೂರಿದ್ದಾರೆ. ಈ ಬಗ್ಗೆ ಗ್ರಾಮದ ದಲಿತರು ತಿಪಟೂರು ಉಪವಿಭಾಗಾಧಿಕಾರಿ, ತಹಸಿಲ್ದಾರ್, ನೊಣವಿನಕೆರೆ ಪೊಲೀಸ್ ಠಾಣೆಗೆ ದೂರು ನೀಡಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.