ಬೆಂಗಳೂರು: ರಾಮನವಮಿ ಆಚರಿಸಿಕೊಂಡು ಕಾರಿನಲ್ಲಿ ತೆರಳುತ್ತಿದ್ದ ಯುವಕರ ಮೇಲೆ ಅನ್ಯಕೋಮಿನ ಯುವಕರು ದಾಳಿ ನಡೆಸಿದ್ದಕ್ಕೆ ಈಗ ರಾಜಕೀಯ ರಂಗು ಅಂಟಿಕೊಳ್ಳುತ್ತಿದೆ. ಯುವಕರ ಮನೆಗೆ ನಿನ್ನೆ ರಾತ್ರಿ ಸಂಸದೆ, ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದಾರೆ.
ರಾಹುಲ್ ಮತ್ತು ಪವನ್ ಎಂಬ ಇಬ್ಬರು ಯುವಕರು ಕಾರಿನಲ್ಲಿ ತೆರಳುತ್ತಿದ್ದವರು ಭಗವಧ‍್ವಜ ಹಿಡಿದು ಜೈಶ್ರೀರಾಮ್ ಎನ್ನುತ್ತಾ ಸಾಗುತ್ತಿದ್ದರು. ಈ ವೇಳೆ ಮಸೀದಿ ಬಳಿ ಅನ್ಯಕೋಮಿನ ಯುವಕರಿಬ್ಬರು ಕಾರು ಅಡ್ಡಗಟ್ಟಿ, ಜೈಶ್ರೀರಾಮ್ ಅನ್ನಬೇಕಾ? ಜೈಶ್ರೀರಾಮ್ ಎಲ್ಲ ಇಲ್ಲ. ಓನ್ಲೀ ಅಲ್ಲಾಹು ಅಕ್ಬರ್ ಎಂದು ನಿಂದಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಯುವಕರು ನಿಮ್ಮ ಹಬ್ಬದ ವೇಳೆ ನಾವು ಹೀಗೆ ಮಾಡುತ್ತೇವಾ ಎಂದು ಪ್ರಶ್ನಿಸಿದ್ದಾರೆ. ಕಾರಿನಲ್ಲಿದ್ದ ಯುವಕರು ಈ ರೀತಿ ಪ್ರಶ್ನೆ ಮಾಡಿ ಕಾರಿನಿಂದ ಇಳಿದಿದ್ದಾರೆ. ಈ ವೇಳೆ ಅನ್ಯಕೋಮಿನ ಮತ್ತಷ್ಟು ಯುವಕರು ಜೊತೆ ಸೇರಿದ್ದು ಕಾರಿನಲ್ಲಿದ್ದವರಿಗೆ ಹಲ್ಲೆ ಮಾಡಿದ್ದಾರೆ.
ಘಟನೆ ಕುರಿತಂತೆ ಯುವಕರು ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಎಫ್ ಐಆರ್ ದಾಖಲಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ನಡುವೆ ನಿನ್ನೆ ತಡರಾತ್ರಿ ಸಂಸದೆ ಶೋಭಾ ಕರಂದ್ಲಾಜೆ ಯುವಕರ ಮನೆಗೆ ಭೇಟಿ ನೀಡಿದ್ದಾರೆ.
ಘಟನೆ ವಿವರ ತಿಳಿದುಕೊಂಡ ಶೋಭಾ ಧೈರ್ಯವಾಗಿರಿ, ನಿಮ್ಮ ಜೊತೆಗೆ ನಾವಿದ್ದೇವೆ. ನಾನು ಡಿಸಿಪಿ ಜೊತೆ ಮಾತನಾಡುತ್ತೇನೆ. ಯಾವುದಕ್ಕೂ ಹೆದರಬೇಡಿ ಎಂದು ಸಾಂತ್ವನ ಹೇಳಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ಘಟಕ ಇಂದು ಪ್ರತಿಭಟನೆ ನಡೆಸಲು ಮುಂದಾಗಿದೆ. ಇಂದು ಬೆಳಿಗ್ಗೆ 9.30 ಕ್ಕೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಮುಂಭಾಗ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.