ಮಹಾರಾಷ್ಟ್ರದಲ್ಲಿ ಕೊರೋನಾ ಹಾಗೂ ಒಮಿಕ್ರಾನ್ ಸೋಂಕಿನ ಆರ್ಭಟದ ನಡುವೆ ಇಂದಿನಿಂದ ಮುಂಬೈ ನಲ್ಲಿ ಶಾಲೆ ಪುನರಾರಂಭಗೊಳ್ಳಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಬಿಎಂಸಿ(ವೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್), ಡಿ.15ರಿಂದ ಮುಂಬೈನಲ್ಲಿ 1-7ನೇ ತರಗತಿ ಶಾಲೆ ಪುನರಾರಂಭಗೊಳ್ಳಲಿದ್ದು, ಎಲ್ಲರೂ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದೆ.
ಕೋವಿಡ್ ನಿಯಮಗಳು ಹೀಗಿವೆ..
ಶಾಲಾ ಸಿಬ್ಬಂದಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸ್ ಮಾಡಿಕೊಳ್ಳಬೇಕು.
ಶಾಲೆಯಲ್ಲಿನ ಎಲ್ಲಾ ಸಿಬ್ಬಂದಿಗಳೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು.
ಕೋವಿಡ್ ಲಕ್ಷಣಗಳಿದ್ದರೆ ಅವರು ಶಾಲೆಗೆ ಬರುವಂತಿಲ್ಲ..
ಶಾಲೆಗೆ ಮಕ್ಕಳ ಹಾಜರಾತಿ ಕಡ್ಡಾಯವಲ್ಲ. ಆನ್ ಲೈನ್ ಶಿಕ್ಷಣದ ವ್ಯವಸ್ಥೆಯೂ ಇರಬೇಕು.
ಆಹಾರ, ನೀರು ಸೇರಿದಂತೆ ಯಾವುದನ್ನು ಹಂಚಿಕೊಳ್ಳದಿರುವಂತೆ ಮಕ್ಕಳಿಗೆ ಸೂಚಿಸಬೇಕು.
ಶಾಲೆಯನ್ನು ಸಮಯಕ್ಕೆ ಅನುಗುಣವಾಗಿ ಸ್ಯಾನಿಟೈಸ್ ಮಾಡಬೇಕು ಎಂದು ಬಿಎಂಸಿ ಶಾಲೆಗಳಿಗೆ ಸೂಚಿಸಿದೆ.
ಮಹಾರಾಷ್ಟ್ರದಲ್ಲಿ ಕೆಲವು ದಿನಗಳಿಂದ ಒಮಿಕ್ರಾನ್ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದ್ದು, ಇಂದಿನಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ. ಮುಂಬೈ ನಗರದಲ್ಲಿ 1-7ನೇ ತರಗತಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1-4ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆ ಪುನರಾರಂಭಗೊಂಡಿದೆ.
ಮಹಾರಾಷ್ಟ್ರದಲ್ಲಿ ನಿನ್ನೆ 8 ಮಂದಿಯಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದ್ದು, ಒಟ್ಟು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೆ ಪೋಷಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.