ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಿಸುವ ಸಲುವಾಗಿ ಒಂದನೇ ತರಗತಿ ಓದುವ ಹೆಣ್ಣು ಮಕ್ಕಳಿಗೆ ಪ್ರತಿ ದಿನದ ಹಾಜರಾತಿಗೆ ನೀಡುವ ಎರಡು ರೂಪಾಯಿ ಪ್ರೋತ್ಸಾಹ ಧನದ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಸದಸ್ಯೆ ತಾರಾ ಅನುರಾಧ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ವರ್ಷಾಂತ್ಯದಲ್ಲಿ ಪ್ರೋತ್ಸಾಹಧನ ನೀಡುತ್ತಿದ್ದರಿಂದ ಪ್ರೋತ್ಸಾಹ ನೀಡಿದಂತೆ ಆಗುತ್ತಿಲ್ಲ ಎಂದು ಹೇಳಿದ್ದಾರೆ.
2013-14ನೇ ಸಾಲಿನಲ್ಲಿ ಜಾರಿಗೆ ತಂದ ಯೋಜನೆಯಾಗಿದ್ದು, ಯೋಜನೆ ಅನುಷ್ಠಾನ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಬರುತ್ತಿದ್ದವು. ಪ್ರೋತ್ಸಾಹಧನ ನೀಡುವ ಜವಾಬ್ದಾರಿಯನ್ನು ಶಾಲಾಭಿವೃದ್ಧಿ ಸಮಿತಿ ವಹಿಸಲಾಗಿತ್ತು. ಅನುದಾನ ಬಳಕೆಯ ವರದಿಗಳು ಬರುತ್ತಿರಲಿಲ್ಲ ಎಂದು ವಿವರಿಸಿದರು.
ಯೋಜನೆಯನ್ನು ಪಾರದರ್ಶಕವಾಗಿ ನಿರ್ವಹಣೆ ಮಾಡುವ ಅಗತ್ಯವಿದ್ದು, ಅದಕ್ಕಾಗಿ ಈ ಯೋಜನೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದರು.