ಉಕ್ರೇನ್ ಮೇಲಿನ ಆಕ್ರಮಣದಿಂದಾಗಿ ರಷ್ಯಾ ಮೇಲೆ ಜಗತ್ತಿನ ಹಲವು ದೇಶಗಳು ವಿವಿಧ ರೀತಿಯ ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ಇದೀಗ ಈ ಸಂಕಷ್ಟದಿಂದ ಹೊರಬರಲು ರಷ್ಯಾ ಅನೇಕ ಯೋಜನೆಗಳನ್ನು ಪ್ರಕಟಿಸುತ್ತಿದೆ.
ಹಲವಾರು ದೇಶಗಳು ವಿವಿಧ ರೀತಿಯ ನಿರ್ಬಂಧಗಳನ್ನು ಹೇರಿರುವ ಕಾರಣದಿಂದಾಗಿ ರಷ್ಯಾ ಕೂಡಾ ತೊಂದರೆಗೆ ಸಿಲುಕಿದ್ದು, ಪರಿಹಾರೋಪಾಯವಾಗಿ ಅನೇಕ ಯೋಜನೆಗಳನ್ನು ಪ್ರಕಟಿಸುತ್ತಿದೆ.
ಇದೀಗ, ಚಿನ್ನವನ್ನು ಖರೀದಿಸುವ ವೇಳೆ ವಿಧಿಸಲಾಗುವ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ತೆಗೆದುಹಾಕಲು ಕಾನೂನು ರೂಪಿಸಲಾಗಿದ್ದು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ಸಹಿ ಹಾಕಿದ್ದಾರೆ.
ವಿವಿಧ ರಾಷ್ಟ್ರಗಳ ನಿರ್ಬಂಧದಿಂದಾಗಿ ರಷ್ಯಾದ ಕರೆನ್ಸಿಯಾದ ರೂಬಲ್ಸ್‌ನ ಮೌಲ್ಯ ಕುಸಿತ ಕಂಡಿದ್ದು, ಹಣ ಹೂಡಿಕೆ ಮಾಡುವುದಕ್ಕೆ ರಷ್ಯಾದ ನಾಗರಿಕರನ್ನು ಪ್ರೋತ್ಸಾಹಿಸುವ ಸಲುವಾಗಿಯೂ ಈ ಕಾನೂನನ್ನು ಪುಟಿನ್ ಸರ್ಕಾರ ಜಾರಿಗೊಳಿಸಿದೆ.
ಈ ಮೊದಲು ಚಿನ್ನ ಖರೀದಿ ಮಾಡುವಾಗ ವ್ಯಾಟ್ ಪಾವತಿ ಮಾಡಬೇಕಾಗಿತ್ತು. ಈಗ ಇದಕ್ಕಿರುವ ವ್ಯಾಟ್ ತೆಗೆದುಹಾಕಿದ್ದು, ಬೆಲೆ ಕಡಿಮೆಯಾಗಿ ಹೆಚ್ಚು ಮಂದಿ ಚಿನ್ನದಲ್ಲಿ ಹೂಡಿಕೆ ಮಾಡಲಿದ್ದಾರೆ. ಅಂದಹಾಗೆ, ಹೊಸ ಕಾನೂನು ಪೂರ್ವಾನ್ವಯವಾಗಿದ್ದು, ಮಾರ್ಚ್ 1ರಿಂದ ನಾಗರಿಕರು ಖರೀದಿಸಿರುವ ಚಿನ್ನದ ವ್ಯಾಪಾರಕ್ಕೆ ಅನ್ವಯವಾಗಲಿದೆ.