ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಸುಳ್ವಾಡಿ ಗ್ರಾಮದಲ್ಲಿ ಪ್ರಸಾದ ಸೇವನೆ ಮಾಡಿ 15 ಜನ ಮೃತಪಟ್ಟ ಘಟನೆಯಿಂದಾಗಿ ಮುಜರಾಯಿ ಇಲಾಖೆ ಎಚ್ಚೆತ್ತುಕೊಂಡಿದ್ದು, ಕಠಿಣ ಕ್ರಮಕ್ಕೆ ಮುಂದಾಗಿದೆ.
ದೇವಸ್ಥಾನಗಳಲ್ಲಿ ನಡೆಯುವ ವಿಶೇಷ ಪೂಜೆ ಹಾಗೂ ಸಮಾರಂಭಗಳಲ್ಲಿ ಅನ್ನದ ರೂಪದ ಪ್ರಸಾದಗಳನ್ನು ವಿತರಿಸಬಾರದೆಂದು ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ.
ದೇವಸ್ಥಾನಗಳಲ್ಲಿ ನಡೆಯುವ ಯಾವುದೇ ವಿಶೇಷ ಪೂಜೆ ಸಮಾರಂಭಗಳಲ್ಲಿ ಲಾಡು ಹೊರತುಪಡಿಸಿ ಅನ್ನದ ರೂಪದ ಪ್ರಸಾದಗಳನ್ನು ನೀಡುವಂತಿಲ್ಲ. ಈ ಕುರಿತು ದೇವಸ್ಥಾನದ ವ್ಯಾಪ್ತಿಯ ಪೊಲೀಸ್ ಠಾಣೆಗಳು ಪರಿಶೀಲನೆ ನಡೆಸಬೇಕೆಂದು ಸೂಚಿಸಿದೆ.
ದೇವಸ್ಥಾನಗಳು ಮುಜರಾಯಿ ಇಲಾಖೆ ಆದೇಶ ಪಾಲಿಸುತ್ತಿರುವ ಕುರಿತಂತೆ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಪರಿಶೀಲನೆ ನಡೆಸಬೇಕು. ದೇವಸ್ಥಾನಗಳಲ್ಲಿ ನಡೆಯುವ ಸಮಾರಂಭ ಪೂಜೆಗಳ ಕುರಿತಂತೆ ಹಾಗೂ ಪ್ರಸಾದ ವಿತರಣೆ ಕುರಿತಂತೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ದೇವಸ್ಥಾನದಲ್ಲಿ ಸ್ವಚ್ಛ ಗಾಳಿ, ಬೆಳಕು ಮತ್ತು ಭಕ್ತರಿಗೆ ಪ್ರಸಾದದೊಂದಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಕಲ್ಪಿಸಬೇಕು ಎಂದು ತಿಳಿಸಿದೆ.
ಮಾಹಿತಿ ಪಡೆದ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ದೇವಸ್ಥಾನಕ್ಕೆ ತೆರಳಿ ಪ್ರಸಾದ ಪರಿಶೀಲನೆ ನಡೆಸಿದ ನಂತರವೇ ಭಕ್ತರಿಗೆ ಹಂಚಬಹುದಾಗಿದೆ. ದೇವಸ್ಥಾನ ಆಡಳಿತ ಮಂಡಳಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸಿದೆ.