ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ನಡೆಸಲಾದ ಭಾರತ್ ಬಂದ್ ಗೆ ಮಹಾನಗರದಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೈತ ಸಂಘಟನೆ ಕಾರ್ಯಕರ್ತರು, ಕಾರ್ಮಿಕ, ವಕೀಲರ, ಕನ್ನಡಪರ ಸಂಘಟನೆಯ ನೂರಾರು ಕಾರ್ಯಕರ್ತರು ಸೋಮವಾರ ಪುರಭವನದಿಂದ ಮೈಸೂರು ಬ್ಯಾಂಕ್ ಸರ್ಕಲ್ವರೆಗೆ ಬೃಹತ್ ರ‍್ಯಾಲಿ, ತಮಟೆ ಚಳವಳಿ ನಡೆಸಿದರು. ಭಗತ್ ಸಿಂಗ್ ಅವರ 114ನೇ ಜನ್ಮದಿನವಾಗಿದ್ದು, ಪ್ರತಿಭಟನೆಯಲ್ಲಿ ಭಗತ್ ಸಿಂಗ್ ಪೋಸ್ಟರ್ಗಳು ರಾರಾಜಿಸಿದವು.
ಕಾರ್ಪೊರೇಟ್ ಏಜೆಂಟ್ ಮೋದಿ, ರೈತ ವಿರೋಧಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು. ತರಕಾರಿ ಮಾಲೆ ಹಾಕಿ ರೈತರನ್ನು ಉಳಿಸಿ ಎಂದು ಆಗ್ರಹಿಸಿದರು. 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯಿಂದ ಬಿಗಿ ಬಂದೋಬಸ್ತ್ ನೀಡಲಾಗಿತ್ತು.
ರೈತ ಸಂಘಟನೆಗಳಲ್ಲಿ ಯಾವುದೇ ಒಡಕಿಲ್ಲ: ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ರೈತ ಸಂಘಟನೆಗಳಲ್ಲಿ ಯಾವುದೇ ಒಡಕಿಲ್ಲ .ಹಳ್ಳಿ ಹಳ್ಳಿಗಳಲ್ಲೂ ಬಂದ್ಗೆ ಬೆಂಬಲ ಸಿಕ್ಕಿದೆ . ಸೋಮವಾರವಾದರೂ ಎಲ್ಲ ರಸ್ತೆ ಖಾಲಿ ಖಾಲಿ ಇದೆ. ರಾಜ್ಯ ಸರ್ಕಾರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕೆಲವೊಂದು ಸಂಘ ಸಂಸ್ಥೆಗಳನ್ನ ಕರೆಸಿ ಬೆಂಬಲ ನೀಡಬೇಡಿ ಅಂತ ಹೇಳಿದೆ. ನಮ್ಮ ಪ್ರತಿಭಟನೆಗೆ ನವೆಂಬರ್ 26ಕ್ಕೆ ಒಂದು ವರ್ಷ ಆಗಲಿದ್ದು, ಅಂದು ನಾವು 5 ಕೋಟಿ ಜನರು ಸೇರಿಕೊಂಡು ದೆಹಲಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಗೆ ಪೊಲೀಸರ ಅಡ್ಡಿ: ಚಂದ್ರಶೇಖರ್ ಮಾತನಾಡಿ, ಜನಸಾಮಾನ್ಯರಿಂದ ಬಂದ್ಗೆ ಬೆಂಬಲ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಕೇಳಿಸಿಕೊಳ್ಳಬೇಕು. ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು, ದೇಶಾದ್ಯಂತ ಚಳವಳಿ ನಡೆಯುತ್ತಿದೆ, ಜನರಿಂದ ವ್ಯಾಪಕ ಪ್ರತಿಕ್ರಿಯೆ ಸಿಕ್ಕಿದೆ ಎಂದರು.