ರಾಯಚೂರು: ವಿರೋಧ ಪಕ್ಷಗಳು ಸುಳ್ಳು ಆರೋಪ ಮಾಡಿ, ರಾಜಕೀಯ ದುರುದ್ದೇಶದಿಂದ ನನ್ನ ರಾಜೀನಾಮೆ ಕೇಳುತ್ತಿದೆ. ಆದರೆ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ, ಹೀಗಿರುವಾಗ ನಾನೇಕೆ ರಾಜೀನಾಮೆ ನೀಡಲಿ. ಸುಳ್ಳು ಆರೋಪಗಳಿಗೆ ಉತ್ತರ ನೀಡುತ್ತೇವೆ ಎಂದರು.
ಇನ್ನು ಮುಡಾ ನಿವೇಶನ ಹಂಚಿಕೆ ಪ್ರಕರಣ ಬೆಳಕಿಗೆ ಬಂದ ನಂತರ ದಲಿತ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜನರು ಅನಗತ್ಯವಾಗಿ ಊಹಾಪೋಹ ಸೃಷ್ಟಿಸುತ್ತಿದ್ದಾರೆ.ಈ ಹಿಂದೆಯೂ ಈ ರೀತಿಯ ಭೇಟಿಯಾಗಿದೆ. ಊಹಾಪೋಹ ಸೃಷ್ಟಿಸುವ ಅಗತ್ಯವೇನಿದೆ ಎಂದರು.
ಮೈಸೂರಿನಲ್ಲಿ ದಸರಾ ಉದ್ಘಾಟನಾ ಸಮಾರಂಭದಲ್ಲಿ ಜೆಡಿಎಸ್ ಹಿರಿಯ ಶಾಸಕ ಜಿಟಿ ದೇವೇಗೌಡ ಅವರು ಸತ್ಯವನ್ನು ಮಾತನಾಡಿದ್ದಾರೆ.
ಜಿ ಟಿ ದೇವೇಗೌಡ ಅವರು ಜೆಡಿಎಸ್‌ನ ಕೋರ್ ಕಮಿಟಿ ಅಧ್ಯಕ್ಷರು ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸದಸ್ಯರಲ್ಲಿ ಒಬ್ಬರು. ಅವರು ಸತ್ಯವನ್ನು ಮಾತ್ರ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಂದರು.
ನನ್ನ ರಾಜೀನಾಮೆ ಕೇಳುತ್ತಿರುವ ಆರ್ ಅಶೋಕ್ ಅವರು ಮೊದಲು ರಾಜೀನಾಮೆ ನೀಡಲಿ.