ಬೆಂಗಳೂರು: ಹಿಜಾಬ್ ನಿಷೇಧಿಸಿದ್ದಕ್ಕಾಗಿ ಸಲ್ಲಿಕೆಯಾಗಿರುವ ಮನವಿ ಕುರಿತು ನ್ಯಾಯಾಲಯದ ತೀರ್ಪು ಪ್ರಕಟಿಸುವವರೆಗೆ ಶಾಲೆಯ ವಿದ್ಯಾರ್ಥಿನಿಯರು ಮತ್ತು ಬೋಧಕರು ಹಿಜಾಬ್ ಮತ್ತು ಬುರ್ಖಾ ತೆಗೆಯುವುದನ್ನು ವಿಡಿಯೊ ಮಾಡುವುದು, ಫೋಟೊ ತೆಗೆಯದಂತೆ 70 ಪ್ರತಿವಾದಿ ಮಾಧ್ಯಮಗಳನ್ನು ನಿರ್ಬಂಧಿಸಿ ಮಧ್ಯಂತರ ಆದೇಶ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗಿದೆ.
ಅಬ್ದುಲ್ ಮನ್ಸೂರ್, ಮುಹಮ್ಮದ್ ಖಲೀಲ್ ಹಾಗೂ ಆಸೀಫ್ ಅಹ್ಮದ್ ಅವರು ವಕೀಲ ಎಸ್ ಬಾಲಕೃಷ್ಣನ್ ಅವರ ಮೂಲಕ ಸಲ್ಲಿಸಿರುವ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗದ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ಮನವಿಯನ್ನು ಹಿಜಾಬ್ಗೆ ಪ್ರಕರಣದ ಜೊತೆ ಸೇರಿಸಲು ಪೀಠವು ಆದೇಶವನ್ನು ಮಾಡಿದೆ.
ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ಬೋಧಕರ ವಿಡಿಯೊ ಮತ್ತು ಫೋಟೊ ಸೆರೆ ಹಿಡಿಯುವುದು ಮತ್ತು ನಿರಂತರವಾಗಿ ಅದನ್ನು ಪ್ರಸಾರ ಮಾಡುವುದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಕೋರಿರುವ ಈ ಮನವಿಯಲ್ಲಿ ರಾಜ್ಯ ಸರ್ಕಾರದ ಗೃಹ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳನ್ನು ಮೊದಲ ಮತ್ತು ಎರಡನೇ ಪ್ರತಿವಾದಿಗಳನ್ನಾಗಿಸಲಾಗಿದೆ.
70 ಮಾಧ್ಯಮಗಳು ಪ್ರತಿವಾದಿಗಳು.
ಆಂಗ್ಲ ಪತ್ರಿಕೆಗಳಾದ ಡೆಕ್ಕನ್ ಹೆರಾಲ್ಡ್, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್, ದಿ ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಕ್ರಾನಿಕಲ್, ದಿ ಹಿಂದೂ, ಬೆಂಗಳೂರು ಮಿರರ್, ರಾಜ್ಯದ ಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣಿ, ಉದಯವಾಣಿ, ವಿಶ್ವವಾಣಿ, ಸಂಜೆವಾಣಿ, ಈ ಸಂಜೆ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ, ಹೊಸ ದಿಗಂತ, ವಾರ್ತಾ ಭಾರತಿ, ಹಾಯ್ ಬೆಂಗ್ಳೂರ್, ಅಗ್ನಿ ಕನ್ನಡ, ಲಂಕೇಶ್ ಪತ್ರಿಕೆ, ಮಂಗಳೂರಿನ ಕರಾವಳಿ ಅಲೆ, ಸುಳ್ಯದ ಸದ್ದಿ ಬಿಡುಗಡೆ, ಹಾಸನದ ಜನತಾ ಮಾಧ್ಯಮ ಕನ್ನಡ, ಮಂಗಳೂರಿನ ಜಯಕಿರಣ, ಶಿವಮೊಗ್ಗದ ಚಲಗಾರ;
ಕನ್ನಡ ಟಿ ವಿ ವಾಹಿನಿಗಳಾದ ಬಿ ಟಿವಿ ನ್ಯೂಸ್, ಟಿವಿ 9, ಪಬ್ಲಿಕ್ ಟಿವಿ, ಸುವರ್ಣ 24/7, ಕಸ್ತೂರಿ ಟಿವಿ, ಪವರ್ ಟಿವಿ, ಟಿವಿ 5, ದಿಗ್ವಿಜಯ ನ್ಯೂಸ್, ನ್ಯೂಸ್ 18 ಕನ್ನಡ, ರಾಜ್ ನ್ಯೂಸ್ ಕನ್ನಡ, ಸಂಭ್ರಮ ಟಿವಿ, ಪ್ರಜಾ ಟಿವಿ, ಜನತಾ ಟಿವಿ, ಬಿಎನ್ ಟಿವಿ, ಮುಕ್ತ ಟಿವಿ, ಮಂಗಳೂರಿನ ನಮ್ಮ ಟಿವಿ ಮತ್ತು ವಿ4 ನ್ಯೂಸ್, ಉಡುಪಿಯ ಸ್ಪಂದನಾ ಟಿವಿ, ಆಂಗ್ಲ ಸುದ್ದಿ ವಾಹಿನಿಗಳಾದ ಎನ್ ಡಿಟಿವಿ ನ್ಯೂಸ್, ಟೈಮ್ಸ್ ನೌ, ಇಂಡಿಯಾ ಟುಡೆ, ನ್ಯೂಸ್ 9, ನ್ಯೂಸ್ 18, ಸಿಎನ್ ಎನ್ ಐಬಿಎನ್, ರಿಪಬ್ಲಿಕ್ ಟಿವಿ, ಹಿಂದಿ ವಾಹಿನಿಗಳಾದ ಆಜ್ ತಕ್, ಎನ್ಡಿಟಿವಿ 24/7, ನ್ಯೂಸ್ ಎಕ್ಸ್, ನ್ಯೂಸ್ 24 (ಇಂಡಿಯಾ), ಜೀ ನ್ಯೂಸ್, ಎಬಿಪಿ ನ್ಯೂಸ್, ಇಂಡಿಯಾ ಟಿವಿ, ಕನ್ನಡ ಟೈಮ್ಸ್ ಮೀಡಿಯಾ ಸಮೂಹ, ಕನ್ನಡ ಟೈಮ್ಸ್ ಮೀಡಿಯಾ ಸಮೂಹದ ಮಾಧ್ಯಮ ಪ್ರತಿನಿಧಿ ಕಿರಣ್;
ಯೂಟ್ಯೂಬ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾ ಪ್ರೈ.ಲಿ., ಫೇಸ್ಬುಕ್ ಇಂಡಿಯಾ ಪ್ರೈ. ಲಿ, ವಾಟ್ಸಾಪ್ ಇಂಡಿಯಾ ಪ್ರೈ.ಲಿ., ಗೂಗಲ್ ಇಂಡಿಯಾ ಪ್ರೈ.ಲಿ., ಯಾಹೂ ಇಂಡಿಯಾ ಪ್ರೈ. ಲಿ., ಇನ್ಸ್ಟಾಗ್ರಾಂ, ಡೈಜಿವರ್ಲ್ಡ್ ಮೀಡಿಯಾ ಪ್ರೈ. ಲಿ., ಸಮಾಚಾರ್.ಕಾಂ, ಒನ್ ಇಂಡಿಯಾ, ಕರ್ನಾಟಕ ಪಬ್ಲಿಷರ್ಸ್ ಅಂಡ್ ಬ್ರಾಡಕಾಸ್ಟರ್ಸ್ ವೆಲ್ ಫೇರ್ ಅಸೋಸಿಯೇಶನ್ಗಳನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.
ಮನವಿದಾರರ ಆಕ್ಷೇಪ
* ಪ್ರತಿವಾದಿ ಮಾಧ್ಯಮಗಳು ಹಿಜಾಬ್, ಕುಮುರ್, ಅಭಯ/ಬುರ್ಖಾ, ಶಿರವಸ್ತ್ರ, ದುಪ್ಪಟ ಧರಿಸಿರುವ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರ ಬೆನ್ನತ್ತಿ, ಕೆಲವು ಕಡೆ ಅವರ ಹಿಂದೆ ಓಡೋಡಿ ಹೋಗಿ ವಿಡಿಯೊ ಮಾಡುವುದು, ಫೋಟೊ ತೆಗೆಯುತ್ತಿದ್ದಾರೆ. ಧಾರ್ಮಿಕ ಗುರುತು ಬಿಂಬಿಸುವ ಉಡುಪು ತೆಗೆಯುವಾಗ ಅಥವಾ ಬಿಚ್ಚುವಾಗ ವಿಡಿಯೊ ಮಾಡಲಾಗುತ್ತಿದೆ. ಸ್ಥಾಪಿತ ಹಿತಾಸಕ್ತಿಗಳ ಪ್ರಚೋದನೆಗೆ ಒಳಗಾಗಿ ಮಾಧ್ಯಮ ಪ್ರತಿನಿಧಿಗಳು ಹೆಣ್ಣು ಮಕ್ಕಳು ಮತ್ತು ಶಿಕ್ಷಕರನ್ನು ಅವಮಾನಿಸುತ್ತಿದ್ದು, ಅವರ ನಂಬಿಕೆ, ಸಂಸ್ಕೃತಿ ಇತ್ಯಾದಿಯನ್ನು ಅಪರಾಧೀಕರಿಸುವ ಕೆಲಸ ಮಾಡುತ್ತಿದ್ದಾರೆ.
*ವಿದ್ಯಾರ್ಥಿ ಸಮೂಹದಲ್ಲಿ ದ್ವೇಷ, ಅಗೌರವ, ಪ್ರತೀಕಾರಕ್ಕೆ ಪ್ರೇರೇಪಿಸಿ ಅಂತಿಮವಾಗಿ ಕ್ರಿಯೆಗೆ ಪ್ರತಿಕ್ರಿಯೆಯ ವಾತಾವರಣ ಸೃಷ್ಟಿಸುವ ಮೂಲಕ ಸಮಾಜವನ್ನು ಧ್ರುವೀಕರಿಸುವ, ವಿಭಜಿಸುವ ಮತ್ತು ಕೋಮು ಬಣ್ಣ ನೀಡುವ ಪ್ರಯತ್ನವನ್ನು ನಿರಂತರವಾಗಿ ಮಾಡಲಾಗುತ್ತಿದೆ.
*ಈ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಉಲ್ಲಂಘಿಸಿ, ನ್ಯಾಯಾಂಗ ನಿಂದನೆ ಎಸಗಿರುವುದಲ್ಲದೇ ಫೆಬ್ರವರಿ 11ರಿಂದೀಚೆಗೆ ತಮ್ಮ ಧಾರ್ಮಿಕ ಆಚರಣೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಚಿತ್ರ ಮತ್ತು ವಿಡಿಯೊ ಸೆರೆ ಹಿಡಿಯುವ ಮೂಲಕ ಕೀಳರಿಮೆ, ಅಪರಾಧೀಕರಿಸುವ ಕೆಲಸವನ್ನು ಪ್ರತಿವಾದಿ ಮಾಧ್ಯಮಗಳು ಮಾಡುತ್ತಿವೆ.
*ಪ್ರತಿವಾದಿ ಮಾಧ್ಯಮಗಳು ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರ ಚಿತ್ರಗಳನ್ನು ನಿರಂತರವಾಗಿ ಪ್ರಕಟಿಸುವುದು ಮತ್ತು ಪ್ರಸಾರ ಮಾಡುವ ಮಾಡುವ ಮೂಲಕ ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಅಸಹಾಯಕ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರ ಚಿತ್ರ/ವಿಡಿಯೊ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಅವರ ಘನತೆಗೆ ಚ್ಯುತಿ ಉಂಟು ಮಾಡುವ ಮೂಲಕ ಸರಿಪಡಿಸಲಾಗದ ಹಾನಿ ಮಾಡಲಾಗುತ್ತಿದೆ.
*ಶಾಲೆಯ ಹೊರಗೆ ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳು ಮತ್ತು ಶಿಕ್ಷಕಿಯರು ಹಿಜಾಬ್, ಬುರ್ಕಾ ತೆಗೆಯುವುದನ್ನು ಚಿತ್ರ/ವಿಡಿಯೊ ಮಾಡಿ ಪ್ರಸಾರ ಮಾಡುವುದರಿಂದ ಅವರನ್ನು ಅವಮಾನ, ಅಗೌರವಕ್ಕೆ ಒಳಪಡಿಸುವುದಲ್ಲದೇ, ಸಾರ್ವಜನಿಕವಾಗಿ ಉಡುಪು ತೆಗೆಯುವುದನ್ನು ಚಿತ್ರೀಕರಿಸಿ ಪ್ರಸಾರ ಮಾಡುವುದನ್ನು ನೋಡಿ ಇಡೀ ಮುಸ್ಲಿಮ್ ಸಮುದಾಯ ಬಾದಿತವಾಗಿದೆ.
*ಹಿಜಾಬ್ ತೆಗೆಸುವುದಕ್ಕೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳು ಕೆಲವು ಶೈಕ್ಷಣಿಕ ಸಂಸ್ಥೆಗಳನ್ನು ಪ್ರಚೋದಿಸುವುದಲ್ಲದೇ, ಹಿಜಾಬ್/ಬುರ್ಕಾ ತೆಗೆಸುವ ಮೂಲಕ ಏನೋ ಸಾಧನೆ ಮಾಡಿದ ರೀತಿ ವರ್ತಿಸುತ್ತಿವೆ. ತಮ್ಮ ಟಿಆರ್ಪಿ ಮತ್ತು ಪ್ರಸರಣ ಹೆಚ್ಚಿಸಿಕೊಳ್ಳಲು ಕೆಲವು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನೂ ಪ್ರಕಟಿಸುತ್ತಿವೆ.
* ಪ್ರತಿವಾದಿಗಳು ಪ್ರಸಾರ/ಪ್ರಕಟ ಮಾಡಿರುವ ಮಾಹಿತಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನ್ಯಾಯಯುತ ಹೇಳಿಕೆ ಎಂದು ಭಾವಿಸಲಾಗದು. ಪ್ರತಿವಾದಿ ಮಾಧ್ಯಮಗಳ ವರದಿಗಾರಿಕೆಯಲ್ಲಿ ದುರುದ್ದೇಶ ಮತ್ತು ದುಷ್ಟತನ ಕಾಣಬಹುದಾಗಿದೆ.
*ಪ್ರತಿವಾದಿಗಳು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಉದ್ದೇಶಪೂರ್ವಕ ತಪ್ಪು ಮಾಹಿತಿ ಪ್ರಕಟ/ಪ್ರಸಾರ ಮಾಡುವುದರಿಂದ ಮುಸ್ಲಿಮ್ ಸಮುದಾಯದ ಘನತೆಗೆ ಚ್ಯುತಿಯಾಗುವುದಲ್ಲದೇ ಸಮಾಜದಲ್ಲಿ ಗೌರವ ಕುಂದುವಂತೆ ಮಾಡುತ್ತದೆ. ಈ ಮೂಲಕ ಸಾರ್ವಜನಿಕರ ಮನದಲ್ಲಿ ನಂಬಿಕೆ ಕುಸಿಯುವಂತೆ ಮಾಡಲಾಗುತ್ತಿದೆ.
*ಸದರಿ ವಿಚಾರದ ಕುರಿತು ಗೃಹ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ ಅಹವಾಲು ನೀಡಿದರೂ ಅವರು ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯದ ಕದತಟ್ಟಲಾಗಿದೆ.
ಭಾರತ ಸಂವಿಧಾನದ 19(1) ಅಡಿ ಮಾಧ್ಯಮಗಳಿಗೆ ಕಲ್ಪಿಸಿರುವ ಸ್ವಾತಂತ್ರ್ಯವು ಪರಿಪೂರ್ಣವಲ್ಲ. *ಸಂವಿಧಾನದ 19(2) ಅಡಿ ಅದನ್ನು ನಿರ್ಬಂಧಿಸಬಹುದಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹಿಜಾಬ್ ಟೂಲ್ಕಿಟ್ ಆರೋಪ:-ಮನವಿ ಸಲ್ಲಿಕೆ
ಅರಾಜಕತೆ ಸೃಷ್ಟಿಸಿ ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ “ಟೂಲ್ ಕಿಟ್” (ಪ್ರತಿಭಟನೆಗಳ ಕುರಿತಾದ ವಿವರ, ಮಾಹಿತಿ, ತಂತ್ರಗಾರಿಕೆ ಹಂಚಿಕೊಳ್ಳುವುದು) ಮೂಲಕ ಹಿಜಾಬ್ ವಿವಾದ ಸೃಷಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ನಲ್ಲಿ ಮತ್ತೊಂದು ಮನವಿ ಸಲ್ಲಿಸಲಾಗಿದೆ.
ಹಿಜಾಬ್ ವಿವಾದದಲ್ಲಿ ಇಸ್ಲಾಮಿಕ್ ಸಂಘಟನೆಗಳ ಪಾತ್ರ ಪತ್ತೆ ಹಚ್ಚುವ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಐಎ) ಅಥವಾ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ವಹಿಸಬೇಕು ಎಂದು ಕೋರಿ ಮುಂಬೈ ಮೂಲದ ವಕೀಲ ಘನಶ್ಯಾಮ್ ಉಪಾಧ್ಯಾಯ ಅವರು ಮನವಿ ಮಾಡಿದ್ದಾರೆ. 2014ರ ಬಳಿಕ ಟೂಲ್ ಕಿಟ್ ಗಳು ಸಕ್ರಿಯವಾಗಿದ್ದು, ಪೌರತ್ವ ತಿದ್ದುಪಡಿ ಕಾಯಿದೆ, ಹೋರಾಟದಲ್ಲಿ ಅದನ್ನು ದಾಖಲಿಸಲಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.