ಬೆಂಗಳೂರು: ನಟ ದರ್ಶನ್ ಆಂಡ್ ಗ್ಯಾಂಗ್ ನಿಂದ ಹಲ್ಲೆಗೊಳಗಾಗಿ ಹತ್ಯೆಯಾಗಿದ್ದಾನೆ ಎನ್ನಲಾದ ರೇಣುಕಾಸ್ವಾಮಿ ಕುಟುಂಬ ಮತ್ತೆ ಆತನ ಪತ್ನಿಗೆ ಸರ್ಕಾರೀ ಕೆಲಸ ಕೊಡಿಸುವಂತೆ ಸರ್ಕಾರಕ್ಕೆ ಮೊರೆಯಿಟ್ಟಿದೆ.
ನಿನ್ನೆ ನಟ ದರ್ಶನ್ ಮತ್ತು ಪವಿತ್ರಾಗೌಡ ಸೇರಿದಂತೆ 6 ಆರೋಪಿಗಳ ಜಾಮೀನು ಅರ್ಜಿ ತೀರ್ಪು ಹೊರಬಿದ್ದಿದೆ. ಅದರಂತೆ ಎಲ್ಲರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಇದರ ಬೆನ್ನಲ್ಲೇ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಮತ್ತು ಚಿಕ್ಕಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಮಗೆ ನ್ಯಾಯಾಲಯದ ಮೇಲೆ ವಿಶ್ವಾಸವಿದೆ. ನ್ಯಾಯಾಂಗದಲ್ಲಿ ಬಡವರಿಗೂ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಮೂಡಿದೆ. ಪ್ರಸನ್ನಕುಮಾರ್ ಒಳ್ಳೆಯ ಲಾಯರ್. ಅವರು ನಮಗೆ ಸಾಕಷ್ಟು ಧೈರ್ಯ ಹೇಳಿದ್ದಾರೆ. ನಮ್ಮ ಮಗನ ಸಾವಿಗೆ ನ್ಯಾಯ ಸಿಗುತ್ತದೆ ಎಂದು ಕಾಶೀನಾಥಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ರೇಣುಕಾಸ್ವಾಮಿ ಚಿಕ್ಕಪ್ಪ ಮಾತನಾಡಿದ್ದು, ರೇಣುಕಾ ಪತ್ನಿ ಸಹನಾಗೆ ಸರ್ಕಾರೀ ಕೆಲಸ ಕೊಡಿ ಎಂದು ಮನವಿ ಮಾಡಿದ್ದಾರೆ. ರೇಣುಕಾಸ್ವಾಮಿ ಪತ್ನಿ ಸಹನಾಗೆ ಮುಂದಿನ ತಿಂಗಳು ಡೆಲಿವರಿಯಾಗಲಿದೆ. ಈಗಲಾದರೂ ಸರ್ಕಾರ ದೊಡ್ಡ ಮನಸ್ಸು ಮಾಡಿ ಆಕೆಗೊಂದು ಸರ್ಕಾರೀ ಕೆಲಸ ಕೊಡಲಿ ಎಂದು ಮನವಿ ಮಾಡಿದ್ದಾರೆ. ಈ ಮೊದಲು ರೇಣುಕಾಸ್ವಾಮಿ ತಂದೆ-ತಾಯಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ತಮ್ಮ ಸೊಸೆಗೆ ಅನುಕಂಪದ ಆಧಾರದಲ್ಲಿ ಸರ್ಕಾರೀ ಕೆಲಸ ಕೊಡಿಸಲು ಮನವಿ ಮಾಡಿದ್ದರು. ಆಗ ಸಾರ್ವಜನಿಕರಿಂದ ತೀವ್ರ ಟೀಕೆ ಕೇಳಿಬಂದಿತ್ತು. ರೇಣುಕಾಸ್ವಾಮಿ ಒಬ್ಬ ಕಾಮುಕನಾಗಿದ್ದ. ಆತ ಸತ್ತರೆ ಆತನ ಪತ್ನಿಗೆ ಸರ್ಕಾರೀ ನೌಕರಿ ಯಾಕೆ ಕೊಡಬೇಕು? ನಮ್ಮ ದೇಶದಲ್ಲಿ ಎಷ್ಟೋ ಜನ ದೇಶ ಸೇವೆ ಮಾಡಿ ಜೀವ ಬಲಿದಾನ ಮಾಡಿದವರಿದ್ದಾರೆ. ಅವರಿಗೆ ನೌಕರಿ ಕೊಡಲಿ ಎಂದು ಟೀಕಿಸಿದ್ದರು.