ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಕೇಂದ್ರ ಸರಕಾರದ ಕಡೆ ಬೊಟ್ಟು ಮಾಡುವ ಬದಲು ರಾಜ್ಯ ಸರಕಾರ ಮೊದಲು ಸಹಕಾರಿ ಸಂಘಗಳಲ್ಲಿರುವ ರೈತರ ಸಾಲ ಮನ್ನಾ ಮಾಡಲಿ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು.
ತುಮಕೂರು ಜಿಲ್ಲೆಯ ಗಂಡಿಹಳ್ಳಿ ಮಠದಲ್ಲಿ ಆರಂಭಿಸಿರುವ ಗೋಶಾಲೆಗೆ ಭೇಟಿ ನೀಡಿ ನಂತರ ಮದ್ದಕನಹಳ್ಳಿ ಗ್ರಾಮಗಳಲ್ಲಿ ಬರ ಅಧ್ಯಯನ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಸಿಎಂ ಸಿದ್ದರಾಮಯ್ಯ ಕುಂಭಕರ್ಣ ನಿದ್ದೆಯಲ್ಲಿ ಮುಳುಗಿದ್ದಾರೆ ಎಂದು ಕಿಡಿ ಕಾರಿದರು.
ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿದ್ದರು ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಟಾಚಾರಕ್ಕೆ ಗೋಶಾಲೆ ಆರಂಭಿಸಿದ್ದಾರೆ ಎಂದು ಆರೋಪಿಸಿದರು.
ಜಾನುವಾರುಗಳ ಮೇವಿನಲ್ಲೂ ಸಹ ರಾಜ್ಯ ಸರಕಾರ ಹಣ ಮಾಡಲು ಹೊರಟಿದ್ದಾರೆ. ಪ್ರತಿ ಜಾನುವಾರುಗಳಿಗೆ 7 ಕೆ.ಜೆ. ಮೇವು ನೀಡುವ ಬದಲಿಗೆ ಕೇವಲ 5 ಕೆ.ಜಿ. ಮೇವು ನೀಡಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಇದನ್ನು ಸರಿಪಡಿಸದಿದ್ದರೆ ಬಿಜೆಪಿ ಉಗ್ರ ಹೋರಾಟ ಕೈಗೊಳ್ಳಲಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ