ಆನೇಕಲ್ ಪುರಸಭೆಗೆ ನಾಮ ನಿರ್ದೇಶನಗೊಂಡಿರುವ 15 ಸದಸ್ಯರನ್ನು ವಿಧಾನ ಪರಿಷತ್ ಸದಸ್ಯರ ಚುನಾವಣೆಯ ಮತದಾರರ ಪಟ್ಟಿಯಿಂದ ಕೈಬಿಡುವಂತೆ ನಿರ್ದೇಶಿಸಬೇಕು' ಎಂದು ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಈ ಸಂಬಂಧ ಬೆಂಗಳೂರು ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಯೂಸುಫ್ ಷರೀಫ್ (ಕೆಜಿಎಫ್ ಬಾಬು) ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, 'ನಾಮನಿರ್ದೇಶಿತ ಸದಸ್ಯರಿಗೆ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡಿ ಮತದಾನದ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದು, ಜನತಾ ಪ್ರತಿನಿಧಿ ಕಾಯ್ದೆ ಮತ್ತು ಸಂವಿಧಾನದ 243 (ಆರ್) (2) (a) (i) ವಿಧಿಗೆ ವಿರುದ್ಧವಾಗಿದೆ.ಇದಕ್ಕೆ ಸರ್ಕಾರದ ಹೆಚ್ಚುವರಿ ವಕೀಲ ಕೆ.ಆರ್.ನಿತ್ಯಾನಂದ, 'ಹೆಚ್ಚುವರಿ ಅಡ್ವೊಕೇಟ್ ಜನರಲ್ ಹಾಜರಾಗಿ ಈ ಸಂಬಂಧ ವಿವರಣೆ ನೀಡಲಿದ್ದಾರೆ. ಆದ್ದರಿಂದ ಕಾಲಾವಕಾಶ ನೀಡಬೇಕು' ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ಗುರುವಾರಕ್ಕೆ (ಡಿ.9) ಮುಂದೂಡಿದೆ. ಕೇಂದ್ರ ಚುನಾವಣಾ ಆಯುಕ್ತರು, ಬೆಂಗಳೂರು ನಗರ ಜಿಲ್ಲೆಯ ವಿಧಾನ ಪರಿಷತ್ ಚುನಾವಣಾಧಿಕಾರಿಯೂ ಸೇರಿದಂತೆ ಒಟ್ಟು 15 ನಾಮನಿರ್ದೇಶಿತ ಸದಸ್ಯರನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.