ಬೆಂಗಳೂರು : ಸೋಮವಾರ ಬಜೆಟ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೇ ನಡೆನುಡಿಗಳನ್ನು ಒಂದಾಗಿಸಿಕೊಂಡು ಕೆಲಸ ಮಾಡುತ್ತಿದ್ದು, ಕರ್ನಾಟಕ ಮಾದರಿಯನ್ನು ಅನುಸರಿಸುತ್ತಿದೆ ಎಂದೆ ಪ್ರಶಂಸೆ ವ್ಯಕ್ತಪಡಿಸಿದರು. ಆರ್ಥಿಕ ಅಸಮಾನತೆಯ ನಡುವೆ ನರಳುತ್ತಿರುವ ಬಡವರಿಗೆ ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳು ಸಾಂತ್ವನ ನೀಡಿವೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಕೇವಲ ಗ್ಯಾರೆಂಟಿ ಯೋಜನೆಗಳಿಂದ ಮಾತ್ರ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಈ ಅರಿವು ಕಾಂಗ್ರೆಸ್ ಪಕ್ಷಕ್ಕೂ ಇದೆ ಎಂದು ನುಡಿದ ಗೆಹ್ಲೋಟ್, ಎರಡು ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಯಿಂದ ಹೊರಬಂದು ಮಧ್ಯಮ ವರ್ಗಕ್ಕೆ ಏರುತ್ತಿದೆ. ಸರ್ಕಾರದ ಒಂದು ನಿರ್ಣಯದಿಂದಾಗಿ ಈ ರೀತಿ ಅಸಮಾನತೆ ಕಡಿಮೆಯಾಗಿರುವುದು ಹೊಸ ದಾಖಲೆಯಾಗಿದೆ ಎಂದರು.
ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಎರಡನೇ ಸ್ಥಾನ ಇದೆ. ಆದರೆ ತೆರಿಗೆ ಪಾಲು ಪಡೆಯುವ ರಾಜ್ಯಗಳ ಪೈಕಿ 10ನೇ ಸ್ಥಾನದಲ್ಲಿದೆ ಎಂದು ನುಡಿದ ರಾಜ್ಯಪಾಲರು, ರಾಜ್ಯಕ್ಕೆ ಸಿಗಬೇಕಿರುವ ನ್ಯಾಯಯುತ ಪಾಲು ಪಡೆಯಲು ಎಲ್ಲ ಪ್ರಯತ್ನಗಳನ್ನೂ ಮಾಡಬೇಕಿದೆ ಎಂದರು.